"ಧರ್ಮೇಚ ಅರ್ಥೈಚ ಕಾಮೇಚ ಮೋಕ್ಷೆಚ ನಾತಿಚರಾಮಿ" ಇದು ಹಿಂದೂ ವಿವಾಹ ವಿಧಿಯ ಮಂತ್ರಗಳಲ್ಲೊಂದು. ನಾಲ್ಕು ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳಲ್ಲಿ ನಾವಿಬ್ಬರೂ ಎಂದಿಗೂ ಒಬ್ಬರನ್ನೊಬ್ಬರು ಅತಿಕ್ರಮಿಸುವುದಿಲ್ಲ ಎಂದು ಇದರ ಅರ್ಥವಾಗಿದೆ.ಹಿರಿಯರು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಅತ್ಯಂತ ಶ್ರೇಷ್ಠ ಸ್ಥಾನವನ್ನು ಕೊಟ್ಟಿದ್ದಾರೆ.ತನ್ನ ತಂದೆ ತಾಯಿ ಮನೆ ಊರನ್ನು ಬಿಟ್ಟು ಗಂಡನೇ ಸರ್ವಸ್ವ ಎಂದು ಬರುವ ಹೆಣ್ಣುಮಗಳು ತನ್ನ ವರ್ತನೆಯಿಂದ ಗಂಡನ ಮನೆಯನ್ನು ನಂದನವನವನ್ನಾಗಿಯೂ ಮಾಡಬಲ್ಲಳು, ಅಥವಾ ನರಕವನ್ನಾಗಿಯೂ ಮಾಡಬಲ್ಲಳು, ಅತಿಯಾದ ಆಸೆ ಮನುಷ್ಯನಿಗೆ ಯಾವತ್ತಿಗೂ ಒಳ್ಳೆಯದಲ್ಲ. ಹಾಸಿಗೆಯಿದ್ದಷ್ಟೇ ಕಾಲು ಚಾಚಬೇಕು. ಈ ಎಲ್ಲ ವಿಷಯವನ್ನು ಸಾಯಿಸುತೆಯವರು ತಮ್ಮ ನಾತಿಚರಾಮಿ ಎಂಬ ಕಾದಂಬರಿಯಲ್ಲಿ ಅತ್ಯದ್ಭುತವಾಗಿ ಹೇಳಿದ್ದಾರೆ.ತನ್ನ ಗೆಳತಿ ಮೌನಳ ವಿವಾಹದ ಕುರಿತಾಗಿ ಚರ್ಚಿಸಲು ಬಂದು ನಿಹಾರಿಕಾಳು ಸಂತೋಷನಿಗೆ ಮನಸೋಲುತ್ತಾಳೆ. ಹೇಗಾದರೂ ಮಾಡಿ ಸಂತೋಷನನ್ನು ಮದುವೆಯಾಗಬೇಕು, ವೈಭವೋಪೇತ ಜೀವನ ನಡೆಸಬೇಕು ಎಂಬ ನಿಹಾರಿಕಾಳ ದುರಾಲೋಚನೆಯ ಮಹತ್ವಾಕಾಂಕ್ಷೆ, ಕೊನೆಗೆ ಸಂತೋಷನನ್ನು ಮದುವೆಯಾಗುವುದರ ಮೂಲಕ ಅದರಲ್ಲಿ ಯಶಸ್ವಿಯಾದ ಬಗೆ ಇವೆಲ್ಲವೂ ಈ ಕಾದಂಬರಿಯಲ್ಲಿ ಮೂಡಿಬಂದಿವೆ. ನಿಹಾರಿಕಾಳ ಅತಿಯಾದ ಆಸೆ, ಸೊಸೆಯಾಗಿ ಬಂದ ನಿಹಾರಿಕಾ ಮನೆಯಲ್ಲಿ ಯಾರೊಂದಿಗೂ ಬೆರೆಯದೆ ಇದ್ದ ರೀತಿ, ಕೊನೆಗೆ "ಎತ್ತು ಏರಿಗೆ, ಕೋಣ ನೀರಿಗೆ" ಎಂಬಂತಾಗುವ ಸಂತೋಷ್ ಮತ್ತು ನಿಹಾರಿಕಾಳ ದಾಂಪತ್ಯ ಜೀವನ, ಅತ್ತಿಗೆ ಮೈದುನರ ನಡುವಿನ ಇರುವ ಮಧುರವಾದ ಸಂಬಂಧ, ಇವೆಲ್ಲವೂ ಈ ಕಾದಂಬರಿಯಲ್ಲಿ ಸ್ಪಷ್ಟವಾಗಿ ಚಿತ್ರಿತವಾಗಿದೆ.
©2024 Book Brahma Private Limited.