ಹೆಣ್ಣು ತನ್ನೊಳಗೆ ಮೊಳಕೆ ಒಡೆಯುವ ಮಗುವಿನಿಂದ ತಾಯ್ತನದ ಸುಖ ಅನುಭವಿಸಿ ಪರಿಪೂರ್ಣಳಾಗುವುದು ಹೆಣ್ಣಿನ ಬಯಕೆಯಾದಂತೆ, ಮಡದಿಯಿಂದ ಮರುಹುಟ್ಟು ಪಡೆಯುವ ಪ್ರಕೃತಿಯ ಈ ಕ್ರಿಯೆ ಗಂಡಿಗೆ ಕುತೂಹಲ ಮಾತ್ರವಲ್ಲದೆ ತನ್ನ ಪೌರುಷದ ಸಂಕೇತ ಕೂಡವಾಗಿದೆ. ಗಂಡಸುತನವನ್ನೇ ಅನುಮಾನಿಸಿ ವ್ಯಂಗ್ಯವಾಡುವ ಸಮಾಜದ ಕುಹಕ ನೋಟ ಸ್ವಾಭಿಮಾನಕ್ಕೆ ಬೀಳುವ ದೊಡ್ಡ ಕೊಡಲಿ ಪೆಟ್ಟಾಗಿದೆ.ತನ್ನದೇ ಮಗು ಬೇಕೆಂಬ ಹಂಬಲಕ್ಕೆ ಬೀಳುವ ಶಂಕರ್ ಮನೆಯವರ ವಿರೋಧದ ನಡುವೆಯೂ ಎರಡನೆಮದುವೆಯಾಗುತ್ತಾನೆ.ಮಕ್ಕಳ ಮನಸ್ಸನ್ನು ಅರಿತು ಸಹಕಾರ ನೀಡಬೇಕಾದ ಹೆತ್ತವರು ತಮ್ಮ ಬುದ್ಧಿಗೇಡಿತನದಿಂದ ದೂರ ನಿಲ್ಲುವ ಬಗೆ,ಆದರೂ ಅವನಿಗಿರುವ ದೃಢನಿಶ್ಚಯ, ಸಮಚಿತ್ತತೆ, ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯ,ಸಂಬಂಧಗಳನ್ನು ಅಲಕ್ಷಿಸದೇ ನೋಡಿಕೊಳ್ಳುವ ಸೂಕ್ಷ್ಮತೆ,ಇವೆಲ್ಲವೂ ಈ ಕಾದಂಬರಿಯಲ್ಲಿ ಬೆರಗುಗೊಳಿಸುವ ರೀತಿಯಲ್ಲಿ ಮೂಡಿಬಂದಿದೆ.ಮಗುವಾದರೆ ತಮ್ಮ ದೇಹದ ಸೌಂದರ್ಯ ಕಳೆದುಕೊಂಡು ಬಿಡುವ ಭಯ,ಬಸಿರನ್ನು ಕುರೂಪವಾಗಿ ಭಾವಿಸುವ, ಹೆರಿಗೆಯನ್ನು ಹೇಸುವ ಹೆಣ್ಣುಗಳಿಗೆ ಕಡಿಮೆಯೇನಿಲ್ಲ.ಅಂತದ್ದೇ ಸಾಲಿಗೆ ಸೇರುವ ಪಾರಿಜಾತಳಿಗೆ ಮಗುವಾಗದ ಶಾಪವೂ ವರವೇ! ಗಂಡ ಅಂದರೆ ಸೌಲಭ್ಯಗಳನ್ನ ಒದಗಿಸಿಕೊಡುವ ಯಂತ್ರ ಮಾತ್ರ ಎಂದುಕೊಳ್ಳುವ ಒಂದು ವರ್ಗದ ಜನರಿದ್ದಾರೆ.ಅವರಿಂದ ನಿರೀಕ್ಷಿಸುವ ಕಾಲುಭಾಗದಷ್ಟಾದರೂ ತಾವು ಅವರಿಗೆ ಕೊಟ್ಟಿದ್ದೀವಾ ಎಂದು ಯೋಚಿಸಲಾರರು.ಅವರಲ್ಲಿ ಬದುಕಿನ ಬಗೆಗೆ ಕನಸ್ಸುಗಳಾಗಲಿ, ಸಮಾಜಕ್ಕೆ ಏನನ್ನಾದರೂ ಸಲ್ಲಿಸಬೇಕೆಂದ ಆಸಕ್ತಿಯಾಗಲಿ ಇರುವುದಿಲ್ಲ.ತಮಗೆ ಬೇಕಾದದ್ದನ್ನು ಇನ್ನೊಬ್ಬರನ್ನು ನೋಯಿಸಿಯಾದರೂ ಪಡೆದು ಖುಷಿಪಡಬಲ್ಲರೇ ಹೊರತು ಇನ್ನೊಬ್ಬರ ಬೇಕು ಬೇಡಗಳಿಗೆ ಸ್ಪಂದಿಸಲಾರರು.ಇಂತಹ ಹಲವು ಸಂಗತಿಗಳನ್ನು ಒಳಗೊಂಡಿರುವ ಕಾದಂಬರಿ ಇದು.
©2024 Book Brahma Private Limited.