ಕೇಂದ್ರ ವೃತ್ತಾಂತ ಚಿತ್ತಾಲರ ಐದನೇ ಕಾದಂಬರಿ, ವಸ್ತುವಿನಲ್ಲಿ, ನಿರೂಪಣಾ ತಂತ್ರದಲ್ಲಿ ಅವರ ಇತರ ಕಾದಂಬರಿಗಳಿಂದ ತೀರ ಭಿನ್ನವಾಗಿದೆ. 'ಮನುಷ್ಯ'ನೆನ್ನುವ ಜೀವಿ ನಿಜಕ್ಕೂ ಅದೆಂತಹ ಸೃಷ್ಟಿ? ಅವನ ನಿಜವಾದ ಸಾಧ್ಯತೆಗಳಾದರೂ ಏನು? - ಎಂದು ಅರಿಯುವ ಬಗೆಗೆ ಚಿತ್ತಾಲರಿಗೆ ಕುತೂಹಲ, ಹಾಗೆ ಅರಿಯುವ ಅನನ್ಯ ಸಾಮರ್ಥ್ಯ ಸಾಹಿತ್ಯಕ್ಕಿದೆ ಎನ್ನುವ ಅವರ ಅಚಲ ನಂಬಿಕೆ ಈ ಕಾದಂಬರಿಯಲ್ಲಿಯೂ ಕೆಲಸ ಮಾಡಿದೆ.
’ಕೇಂದ್ರ ವೃತ್ತಾಂತ'ದಲ್ಲಿ ಖೇತವಾಡಿಯ 'ಖೇಮರಾಜ ಭವನ'ದ ಬಿಡಾರವೊಂದರಲ್ಲಿ ವಾಸಿಸುತ್ತಿದ್ದ, ರಾಮಜಿಭಾಯಿ-ಜಯಂತಿ ದಂಪತಿಯ ಮಗಳು, ರೇಖಾ,... ಒಂದು ರಾತ್ರಿ ಯಾರಿಗೂ ಹೇಳದೇ ಕೇಳದೇ ಯಾರೊಡನೆಯೋ ಓಡಿ ಹೋಗುವುದರೊಂದಿಗೆ ಕಥೆ ಪ್ರಾರಂಭವಾಗುತ್ತದೆ.
ಈ ಕಾದಂಬರಿಯ ತಂತ್ರವು ಶಿವರಾಮ ಕಾರಂತರ ’ಅಳಿದ ಮೇಲೆ’ ಕಾದಂಬರಿಯ ತಂತ್ರವನ್ನು ಹೋಲುತ್ತದೆ. ಹಾಗೆಯೇ ಅದಕ್ಕಿಂತ ಭಿನ್ನವೂ ಆಗಿದೆ. ನಾಗ ಐತಾಳರು ಈ ಎರಡು ಕಾದಂಬರಿಗಳ ನಿರೂಪಕ-ನಿರೂಪಣೆಯ ಸ್ವರೂಪವನ್ನು ಕುರಿತು ’ಈ ಕಾದಂಬರಿಯ ಒಂದು ವಿಶಿಷ್ಟತೆಯೆಂದರೆ, ಅಲ್ಲಿ ಬಳಸಿರುವ ತಂತ್ರ. ಕಾರಂತರ ’ಅಳಿದ ಮೇಲೆ' ಕಾದಂಬರಿಯ ನೆನಪು ತರುತ್ತದೆ. ಇವೆರಡೂ ಕಾದಂಬರಿಗಳಲ್ಲಿ ಬಳಸಿರುವ `ನಿರೂಪಣೆಯ ತಂತ್ರ ಕಾದಂಬರಿಗೆ ಬೇರೆಯೇ ರೂಪವನ್ನು ನೀಡಿದೆ. ಆದರೆ, ಕಾರಂತರ ಬಳಕೆಯಲ್ಲೂ ಚಿತ್ತಾಲರ ಬಳಕೆಯಲ್ಲೂ ವ್ಯತ್ಯಾಸವಿರುವುದನ್ನು ಗಮನಿಸಬಹುದು. ಮುಖ್ಯವಾಗಿ, ಚಿತ್ತಾಲರು ಬಳಸಿದ ನಿರೂಪಕ, 'ನನ್ನ ಹೆಸರು ಅಭಿಜಿತ್. ನಾನು ಈ ಕಥಾಪ್ರಸಂಗದ ನಿರೂಪಕನೆಂದು ಮೊದಲೇ ಗುರುತಿಸಿಕೊಂಡಿದ್ದಾನೆ; ಹಾಗೂ, ಅವನೇ ಕಾದಂಬರಿಯಲ್ಲಿ 'ಕೇಂದ್ರ ಸ್ಥಾನವನ್ನು ಬಹುಮಟ್ಟಿಗೆ ಆಕ್ರಮಿಸಿದ್ದಾನೆ. ಅಂದರೆ, ಇಲ್ಲಿ ನಿರೂಪಕನೇ ಕಥಾನಾಯಕ. ’ಅಳಿದ ಮೇಲೆ' ಕಾದಂಬರಿಯಲ್ಲಿ 'ಯಶವಂತ' ಕಥಾನಾಯಕನಾಗಿದ್ದು, ನಿರೂಪಕ, 'ವೃತ್ತದ ಪರಿದಿಯಲ್ಲಿದ್ದೇ, ಕಥಾನಿರೂಪಣೆಯನ್ನು ಮಾಡುತ್ತ, ಕಾದಂಬರಿಯಲ್ಲೊಂದು ಮುಖ್ಯ ಸ್ಥಾನವನ್ನೂ ಪಡೆದಿದ್ದಾನೆ. ಅಲ್ಲಿ ಅವನು (ನಿರೂಪಕ), ಯಶವಂತ ಅಳಿದ ಮೇಲೆ, ಅವನು ಬಿಟ್ಟುಹೋದ ಹಣದ ಹಂಚುವಿಕೆಯನ್ನು ಸ್ನೇಹಿತನಾದ `ನಿರೂಪಕ'ನಿಗೆ ವಹಿಸಿಕೊಟ್ಟಿದ್ದುದರಿಂದ, ಆ ಹಣ ಪಡೆಯಲು ಅರ್ಹರಾದವರನ್ನು ಅರಸುತ್ತ ಹೋದಂತೆ, ಯಶವಂತನ ಜೀವನ ಮೌಲ್ಯ ಮತ್ತು ಅವನ 'ಜೀವನ ಚರಿತ್ರೆಯೇ ಓದುಗರ ಮುಂದೆ ಹರಡುವಂತಾಗುತ್ತದೆ. ಅಂದರೆ, 'ಅಳಿದ ಮೇಲೆ'ಯಲ್ಲಿ ಕತೆ 'ಹಿಂದು-ಹಿಂದಾಗಿ' ಸರಿಯುತ್ತ, ನಿರೂಪಣೆ ಮುಂದುವರಿಯುತ್ತ ಹೋಗುತ್ತದೆ. ಅದೊಂದು (ಆ ಕಾಲದಲ್ಲಂತೂ) ಅಪೂರ್ವ ತಂತ್ರ. ಆದರೆ, ಕೇಂದ್ರ ವೃತ್ತಾಂತದಲ್ಲಿ ನಿರೂಪಕ 'ಖೇತವಾಡಿಯ ಚಾಳಿನಲ್ಲಿ ನಡೆದ ಒಂದು ಘಟನೆಯಲ್ಲಿ ತನ್ನನ್ನು ತಾನೇ ತೊಡರಿಸಿಕೊಂಡು, ಹಲವಾರು ತೊಂದರೆಗಳಿಗೊಳಗಾಗುತ್ತಾನೆ. ಹಾಗಾಗಿ, ನಿರೂಪಣೆಯಲ್ಲಿ ಈ ಎರಡು ಕಾದಂಬರಿಯಲ್ಲಿ ವ್ಯತ್ಯಾಸ ಕಂಡುಬರುವುದು ಸಹಜ’ ಎಂದು ವಿಶ್ಲೇಷಿಸಿದ್ದಾರೆ.
©2024 Book Brahma Private Limited.