ನಮ್ಮಿಬ್ಬರಿಗೂ ಇಷ್ಟವಾಗುವಂತಹ ಸಂಗತಿಗಳು ನಡೆದಾಗಲೆಲ್ಲಾ ನೀ ಇಲ್ಲದಿರುವುದು ಹೊಸ ವಿಷಯವೇನಲ್ಲ ಬಿಡು. ಇವತ್ತು ಕೂಡಾ ಅಷ್ಟೆ, ನೀನಿಲ್ಲಿ ಇಲ್ಲವೇ ಇಲ್ಲ. ಎಷ್ಟೋ ಸಲ ಬರಿದೇ ನಮ್ಮಿಬ್ಬರ ಮಾತಿಗೆ ವಸ್ತುವಾಗಿದ್ದ ಆ ಗಳಿಗೆಯನ್ನು ನಾನಿವತ್ತು ಅಕ್ಷರಶಃ ಅನುಭವಿಸಿದೆ. ಬೆಳಿಗ್ಗೆ ಮನೆ ಶಾಂತವಾಗಿತ್ತು. ನನ್ನ ಹೊರತು ಬೇರೆ ಯಾರೂ ಇರಲಿಲ್ಲ. ಮನದಲ್ಲೇ ಯೋಚಿಸುತ್ತಾ ನಾನದೆಷ್ಟು ಹೊತ್ತು ಹಾಗೆಯೇ ಮನೆಯೊಳಗೆ ಕೂತಿದ್ದೆನೋ ಏನೋ? ಆಮೇಲೆ ನಿಧಾನವಾಗೆದ್ದು ಹಿತ್ತಲಿನ ಕಟ್ಟೆಯ ಮೇಲೆ ಕಾಲಿಳಿಬಿಟ್ಟುಕೊಂಡು ನಂದಿಬಟ್ಟಲ ಮರದ ಎಲೆಗಳ ನಡುವಿನಿಂದ ತೂರಿ ಬಂದು ಮಣ್ಣಿನ ಮೇಲೆ ಡಿಸೈನ್ ಮೂಡಿಸಿದ ಸೂರ್ಯಕಿರಣಗಳಿಗೆ ಮೈ ಕಾಸುತ್ತಾ ಒಂದು ಗಳಿಗೆ ಕೂತೆ. ಆಮೇಲೆ ಮನೆಯ ಸುತ್ತಾ ಅಡ್ಡಾಡಿದೆ, ಹಾಗೇ ಸುಮ್ಮನೆ. ಹಬ್ಬಿದ್ದ ಪ್ರಶಾಂತತೆಯಿಂದಾಗಿ ಬೇರೆ ಯಾರದೋ ಮನೆಯಲ್ಲಿ ಅಡ್ಡಾಡಿದಂತೆ ಭಾಸವಾಯ್ತು. ಅಡುಗೆಮನೆಯ ಕಿಟಕಿಯಲ್ಲಿ ಕೂತ ಗುಬ್ಬಿಯ ಚಿಲಿಪಿಲಿ ಇಡೀ ಮನೆಯನ್ನು ತುಂಬಿಕೊಂಡಿತ್ತು. ಎಲ್ಲಾ ಕೋಣೆಗಳು ಒಂದಕ್ಕಿಂತಾ ಒಂದು ಖಾಲಿ, ಒಂದಕ್ಕಿಂತ ಒಂದು ಸ್ತಬ್ಧ. ಪಡಸಾಲೆಯ ನಟ್ಟ ನಡುವೆ ಗುಡಾರದಂತೆ ಹೊಚ್ಚ ಹೊಸ ನ್ಯೂಸ್ ಪೇಪರ್ ಕೂತಿತ್ತು. ಬಾಗಿಲಲ್ಲಿ ಹಾಲಿನ ಪಾಕೀಟು; ಅಲ್ಲೇ ಒಂದು ಹೂವಿನ ಕಟ್ಟು. ಆದರೆ ಗೋಡೆಯ ಮೇಲೆ ಕಣ್ಣು ಹಾಯಿಸಿದಾಗಲೇ ಗೊತ್ತಾಯ್ತು, ಅಂಥಾ ಖಾಸಾ ಏಕಾಂತ ಇದೇನಾಗಿರಲಿಲ್ಲ ಅಂತ. ಅಜ್ಜ ಅಜ್ಜಿ ತಮ್ಮ ತಮ್ಮ ಫೋಟೋಪ್ರೇಮಿನಲ್ಲಿ ಕೂತು ನನ್ನತ್ತಲೇ ದುರುಗುಟ್ಟುತ್ತಿದ್ದಾರೆ, ಅಪನಂಬುಗೆಯಲ್ಲಿ! ನಾನು ಕೋಣೆಯ ತುಂಬ ಅಡ್ಡಾಡಿ ಬೇರೆ ಬೇರೆ ಕೋನದಲ್ಲಿ ನಿಂತು ಅವರು ನೋಡಿದೆ. ಅವರೂ ನನ್ನತ್ತಲೇ ದುರುಗುಟ್ಟಿದರು. ಕಡೆಗೆ ನಾನು ಅಡುಗೆ ಮನೆಗೆ ಹೋಗಿ ಕಾಫಿ ಮಾಡಿಕೊಂಡು ಬಂದು ನಡುಮನೆಯ ಕಿಟಕಿಯ ಬಳಿ ಕೂತುಕೊಂಡೆ. ಪಕ್ಕಕ್ಕಿದ್ದ ಲೇಡಿಜ್ ಹಾಸ್ಟೆಲ್‌ನ ಗದ್ದಲ ಕೂಡಾ ಇಂದು ಬಂದ್! ಅದ್ಯಾಂಗೆ? ( ಆಯ್ದಭಾಗ)
ಸಪ್ನಾ ಕಟ್ಟಿ ಮೂಲತಃ ಧಾರವಾಡದವರು,ಭೌತಶಾಸ್ತ್ರ ಸ್ನಾತಕೋತ್ತರ ಪದವೀಧರೆ ಆಗಿದ್ದಾರೆ. ಇವರ ಅನೇಕ ಕತೆಗಳು ಕನ್ನಡದ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 2018ರ ಕರ್ಮವೀರ ದೀಪಾವಳಿ ಕಥಾಸ್ಪರ್ಧೆಯಲ್ಲಿ ಇವರ 'ಯಂತ್ರ' ಕತೆಗೆ ವಿಶೇಷ ಬಹುಮಾನ ಸಂದಿದೆ. 'ಹಿ, ಶಿ, ಇಟ್' ಎಂಬ ಇಂಗ್ಲಿಷ್ ಕತೆಗೆ 'ಸೈನ್ಸ್ ರಿಪೋರ್ಟರ್' ಪತ್ರಿಕೆಯು 2021 ಜುಲೈನಲ್ಲಿ ಏರ್ಪಡಿಸಿದ ರಾಷ್ಟ್ರೀಯ ಕಥಾಸ್ಪರ್ಧೆಯಲ್ಲಿ ಮೂರನೆಯ ಬಹುಮಾನ ಬಂದಿದೆ. ಮರಾಠಿಯ ಸುಪ್ರಸಿದ್ಧ ಸಾಹಿತಿ ಶ್ರೀ ವ. ಪು. ಕಾಳೆಯವರ 'ಮಹೋತ್ಸವ' ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಗಳು: ಕೋಬಾಲ್ಟ್ ಬ್ಲೂ ...
READ MORE