‘ಜೋಗತಿ’ ವಿ.ಆರ್. ರಾಸಾನಿ ಅವರ ತೆಲುಗು ಕಾದಂಬರಿಯನ್ನು ಲೇಖಕ ಟಿ.ಡಿ. ರಾಜಣ್ಣ ತಗ್ಗಿ ಅವರು ಕನ್ನಡೀಕರಿಸಿದ್ದಾರೆ. ಸಾಮಾಜಿಕ ತುಳಿತಕ್ಕೊಳಗಾದ ದಲಿತಕೇರಿಯ ಹೆಣ್ಣು ಮಕ್ಕಳ ಗೋಳಿನ ಕಣ್ಣೀರಗಾಥೆ ಇದು. ಹಳ್ಳಿಗಳಲ್ಲಿ ಸಾಮಾಜಿಕವಾಗಿ ನಡೆಯುವ ಅನಿಷ್ಟ ಸಂಪ್ರದಾಯವಾದ ಜೋಗತಿ ಅಥವಾ ದೇವದಾಸಿ ಎಂಬ ಆಚಾರವನ್ನು ಕುರಿತದ್ದು, ಇಂಥ ದುಷ್ಟ ಆಚಾರಕ್ಕೆ ಬಲಿಯಾಗಿ ಮುದ್ರೆಯೊತ್ತಿಸಿಕೊಂಡ ಕೇರಿಯ ಹೆಣ್ಣುಮಕ್ಕಳು ತಮ್ಮ ಕುಟುಂಬಗಳ ಹೊರತಾಗಿ, ಊರಿನ ಸರ್ಪಂಚನಿಂದ ಶೀಲವನ್ನು ಕಳೆದುಕೊಂಡು ಆ ನಂತರ ಊರಿನ ಎಲ್ಲರ ಕಾಮದಾಹಕ್ಕೆ ಬಲಿಯಾಗುವ ವ್ಯಥೆಯೇ ಇದರ ಪ್ರಮುಖ ತಿರುಳು.
ಕೆಳವರ್ಗದ ಹೆಣ್ಣು ಮಕ್ಕಳ ಬದುಕನ್ನು ನಾಶ ಮಾಡುವ ಮೌಢ್ಯ ಮತ್ತು ಅಧಿಕಾರವೇ ಕಾದಂಬರಿಯ ಕೇಂದ್ರ ವಸ್ತು. ಮೌಢ್ಯಕ್ಕೆ ಸಾಂಕೇತಿಕವಾಗಿ ದಲಿತ ಕೇರಿಯ ಜನರು ಕಂಡುಬಂದರೆ, ಕಾಮದಾಹಕ್ಕೆ ಸಾಂಕೇತಿಕವಾಗಿ ಅಧಿಕಾರ ವರ್ಗ ಅಥವಾ ಶೋಷಕ ವರ್ಗ ಕಾಣಿಸುತ್ತದೆ. ಇವೆರಡರ ನಡುವೆ ಸಂಪರ್ಕ ಕೊಂಡಿಯಂತೆ ದೇವರು, ಧರ್ಮ, ಶಾಸ್ತ್ರ, ಆಚಾರಗಳ ಹೆಸರಿನಲ್ಲಿ ಹೆಣ್ಣುಮಕ್ಕಳ ಬದುಕಿಗೆ ಪಾಶವನ್ನು ಎಸೆಯುವ ಪುರೋಹಿತಶಾಹಿ ವರ್ಗವೂ ಮತ್ತೊಂದು ಕಡೆ ಇದ್ದು, ಇವೆಲ್ಲವುಗಳ ನಡುವೆ ನಲುಗುವ ಕೇರಿಯ ಹೆಣ್ಣು ಮಕ್ಕಳು ಅದರಲ್ಲೂ ಕಾದಂಬರಿಯ ನಾಯಕಿ ಕೋಟಮ್ಮ ಏನೆಲ್ಲ ಕಷ್ಟಗಳಿಗೆ ಗುರಿಯಾಗುತ್ತಾಳೆಂಬುದೇ ಈ ಕಾದಂಬರಿಯ ಜೀವಾಳ. ದೇವರ ಹೆಸರಿನಲ್ಲಿ ಲೈಂಗಿಕ ಶೋಷಣೆಗೆ ಒಳಗಾಗುವ ದಲಿತ ಹೆಣ್ಣುಮಕ್ಕಳ ಕಣ್ಣೀರ ಕಥೆಯು, ನಿರೂಪಣಾ ಶೈಲಿಯಿಂದ ಓದುಗರ ಗಮನ ಸೆಳೆಯುತ್ತದೆ.
©2024 Book Brahma Private Limited.