‘ಗೂಳಿ’ತಮಿಳು ಲೇಖಕಿ ಶ್ರೀಮತಿ ಕಣ್ಮಣಿ ಅವರ ‘ಇಡಬಂ’ ಕಾದಂಬರಿಯ ಕನ್ನಡಾನುವಾದ. ಲೇಖಕ, ಅನುವಾದಕ ಕೆ. ನಲ್ಲತಂಬಿ ಅವರು ಈ ಕೃತಿಯನ್ನು ಕನ್ನಡೀಕರಿಸಿದ್ದಾರೆ. ಇದು ಶೇರು ಮಾರುಕಟ್ಟೆಯನ್ನು ವಿಷಯವಾಗಿಟ್ಟುಕೊಂಡು ಅದರ ಸುತ್ತ ತನ್ನ ಸ್ವತಂತ್ರ ಬದುಕನ್ನೂ ಹೇಳುವಂತಹ ಒಂದು ಹೆಣ್ಣಿನ ಕಥೆಯಾಗಿದ್ದು, ತಮಿಳಿಗೆ ಮಾತ್ರ ಹೊಸದಾಗಿರದೆ ಕನ್ನಡಕ್ಕೂ ಹೊಸದಾಗಿಯೇ ಇದೆ ಎನ್ನುತ್ತಾರೆ ಅನುವಾದಕ ನಲ್ಲತಂಬಿ.
ಈ ಕೃತಿಗೆ ಕವಿ ಸಂಧ್ಯಾರಾಣಿ ಅರ್ಥಪೂರ್ಣ ಬೆನ್ನುಡಿ ಬರೆದಿದ್ದಾರೆ. ‘ಸಾಧಾರಣವಾಗಿ ಹೆಂಗಸರು ಕಡಿಮೆ ಪ್ರತಿನಿಧಿಸಲ್ಪಟ್ಟಿರುವ ಶೇರುಪೇಟೆಯ ಹಿನ್ನಲೆಯಲ್ಲಿ ಈ ಕಥೆಯನ್ನು ಕಟ್ಟಿರುವ ರೀತಿ ನನಗೆ ಅಚ್ಚರಿ ಇತ್ತಿತ್ತು. ಈ ಕಥೆಯ ಹಿನ್ನಲೆ ಕಡೆಯವರೆಗೂ ಶೇರುಪೇಟೆಯೇ ಆಗಿರುವುದೇ ಅಲ್ಲದೆ ಇಡೀ ಶೇರುಪೇಟೆ ಮತ್ತು ಶೇರುಪೇಟೆಯನ್ನು ಆಕೆ ನಿರ್ವಹಿಸುವ ರೀತಿ, ಅವಳು ಬದುಕನ್ನು ನಿರ್ವಹಿಸುವ ರೀತಿಗೆ, ಅದರ ದಾವ್ ಪೇಚ್ಗೆ ರೂಪಕವಾಗಿ ಬಂದಿದೆ. ಶೇರುಪೇಟೆಯಲ್ಲಿ ಕರಡಿಗಳೂ, ಗೂಳಿಗಳೂ ಇರುವ ಹಾಗೆ ಬದುಕಿನಲ್ಲೂ ಎರಡು ಮಾದರಿಗಳಿರುತ್ತವೆ. ಒಂದು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವುದು, ಇನ್ನೊಂದು ನುಗ್ಗಿಹೋಗುವುದು. ಅದೇ ಕರಡಿ ಮತ್ತು ಗೂಳಿ ಆಟ. ಕರಡಿಯ ವ್ಯಕ್ತಿತ್ವವನ್ನು ನಿಧಾನವಾಗಿ ಕಳಚಿಕೊಂಡ ನಾಯಕಿ, ಬೇರೆಯವರ ಬುದ್ಧಿವಂತಿಕೆಯ ಮೇಲೆ ಆಧಾರ ಪಡುವುದನ್ನು ಬಿಟ್ಟು ತನ್ನ ಜಾಣತನ ಮತ್ತು ಆತ್ಮವಿಶ್ವಾಸಗಳ ಮೇಲೆ ನಂಬಿಕೆ ಇಟ್ಟು, ಗೂಳಿಯ ಹಾಗೆ ಡ್ರೈವಿಂಗ್ ಸೀಟಿನಲ್ಲಿ ಕುಳಿತು ಸ್ಟೇರಿಂಗ್ ಹಿಡಿದಾಗಲೇ ಬದುಕು ಮತ್ತು ಶೇರು ಮಾರುಕಟ್ಟೆ ಎರಡೂ ಅವಳಿಗೆ ದಕ್ಕುತ್ತವೆ. ಹಾಗಾಗಿಯೇ ಈ ಕಥೆಗೆ ’ಗೂಳಿ’ ಎನ್ನುವ ಹೆಸರು ಸಮರ್ಪಪಕವಾಗಿದೆ’ ಎನ್ನುತ್ತಾರೆ ಸಂಧ್ಯಾರಾಣಿ.
ತನಗೆ ಬೇಕನ್ನಿಸಿದ್ದನ್ನು ಹೇಳುವ, ಬೇಡವೆಂದಾಗ ಯಾವುದೇ ಬಾಹ್ಯ ಒತ್ತಡಗಳಿಗೆ ಮಣಿಯದೆ ಮನಸ್ಸಿನ ಮಾತನ್ನು ಕೇಳುವ ನಾಯಕಿ ಅದನ್ನು ನಿಮಗೆ ಒಪ್ಪಿಸಲು ಪ್ರಯತ್ನಿಸುವುದಿಲ್ಲ. ಇಲ್ಲಿ ಆಕೆಯ ಬದುಕಿಗೆ ಸಮಜಾಯಿಷಿ ಹೇಳುವ ಕಾರಣಗಳನ್ನಾಗಲೀ ಹೇಳದೆ, ಆಕೆಯನ್ನು ಸೋಲಿಸಿ ಮತ್ತೆ ಸೋ ಕಾಲ್ಡ್ ಸಾಮಾಜಿಕ ಪರಿಧಿಯೊಳಗೆ ತರುವ ಯಾವುದೇ ಪ್ರಯತ್ನ ಮಾಡದೆ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ಅದು ಈ ಕತೆಗೆ ಒಂದು ಅನನ್ಯತೆಯನ್ನು ಕೊಡುತ್ತದೆ.
©2024 Book Brahma Private Limited.