ಪತ್ರಕರ್ತ ಗ್ಯಾಬ್ರಿಯೆಲ್ ಮಾರ್ಕೆಜ್ ಸಾಹಿತ್ಯಲೋಕ ಕಂಡ ಪ್ರಮುಖ ಕಾದಂಬರಿಕಾರ. ’ಮಾಂತ್ರಿಕ ವಾಸ್ತವವಾದ’ ಎಂಬ ಹೊಸ ಶೈಲಿ-ಪ್ರಕಾರವನ್ನೇ ಹುಟ್ಟು ಹಾಕಿದವ. ವಾಸ್ತವಿಕತೆ-ಮಾಂತ್ರಿಕತೆಗಳೆರಡನ್ನೂ ಬೆಸೆದ ಲೇಖಕ. ನೊಬೆಲ್ ಸಾಹಿತ್ಯ ಪುರಸ್ಕಾರ ಪಡೆದಿದ್ದ ಮಾರ್ಕೆಜ್ ನ ಕಾದಂಬರಿಗಳ ಪೈಕಿ ’ಒಂದು ನೂರು ವರ್ಷಗಳ ಏಕಾಂತ’ ಅತ್ಯಂತ ಜನಪ್ರಿಯವಾದದ್ದು. ಮಾರ್ಕೆಜ್ ನ ಈ ಜನಪ್ರಿಯ ಕಾದಂಬರಿಯನ್ನು ಅನುವಾದಕಿ ವಿಜಯಾ ಸುಬ್ಬರಾಜ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಮನಮುಟ್ಟುವ ಸತ್ಯ, ಅನುಕಂಪ, ಕಾವ್ಯಾತ್ಮಕ ಮಾಂತ್ರಿಕತೆಯ ಲೋಕವೇ ಈ ಕಾದಂಬರಿಯಲ್ಲಿ ಅನಾವರಣಗೊಂಡಿದೆ. 'ಒಂದು ನೂರು ವರ್ಷಗಳ ಏಕಾಂತ' ಲ್ಯಾಟಿನ್ ಅಮೇರಿಕಾದ ಗುಡ್ಡದ ತಪ್ಪಲು ಪ್ರದೇಶದ ಹಳ್ಳಿಯಲ್ಲಿ ನಡೆಯುವ ಕತೆ. ವ್ಯಸನ, ಕ್ರೌರ್ಯ, ಪ್ರೇತಗಳ ಮತ್ತು ಕನಸುಗಳನ್ನು ಒಳಗೊಂಡ ಕಲ್ಪನಾ ಕಾವ್ಯ ಈ ಕತೆಯಲ್ಲಿ ಒಡಮೂಡಿದೆ. ಮಾರ್ಕೆನ ಬರವಣಿಗೆಯ ಹೆಣಿಗೆಯು ರೂಢಿಗತ ಮಾದರಿಯ ಕ್ರಮವಾದ ಕಾಲಗತಿಯಲ್ಲಿ ಇರುವುದಿಲ್ಲ. ಅತಿಲೌಕಿಕಕತೆ ಹಾಗೂ ನಿತ್ಯದ ಜೀವನಗಳೆರಡನ್ನೂ ಸೇರಿಸಿ ಕತೆ ಕಟ್ಟುವ ಕಾರಣಕ್ಕಾಗಿ ಪ್ರಪಂಚ ಮಾರ್ಕೆಜ್ ಗೆ ಮಾರುಹೋಗಿದೆ. 'ಮಾಂತ್ರಿಕ ವಾಸ್ತವವಾದ'ದ ಬಗ್ಗೆ ಕುತೂಹಲ ಆಸಕ್ತಿ ಮೂಡಲು ಕಾರಣವಾದದ್ದು ಮಾರ್ಕೆಜ್ ಬರವಣಿಗೆಗಳು. ಪದಗಳ ಸೊಗಸಾದ ಬಳಕೆಯಿಂದ ಕ್ಷುಲ್ಲಕ ಎನಿಸುವ ಘಟನೆಯನ್ನು ವೈಭವೀಕರಿಸುವ ಮಾರ್ಕೆಜ್ ಘನವಾದ- ಪವಿತ್ರವಾದ ಸಂಗತಿಯನ್ನು ಕ್ಷುಲ್ಲಕವಾಗಿಸುವ ಹಾಗೆ ಬರೆಯುತ್ತಾನೆ. ಅತಿ ಸಣ್ಣ ಘಟನೆ ಕೂಡ ಅವನ ಕೈಯಲ್ಲಿ ಜೀವಸೆಲೆ ಉಕ್ಕಿಸುವ ಮಹಾಕಾವ್ಯವಾಗುತ್ತದೆ.
'ಒಂದು ನೂರು ವರ್ಷಗಳ ಏಕಾಂತ' ಕೃತಿ ಕುರಿತು ಲೇಖಕ ಎ ಎನ್ ಪದೆಸನ್ನ ಅವರಿಂದ ಮಾತುಗಳು.
©2025 Book Brahma Private Limited.