ಅಮ್ಮ ಸತ್ತ ಸ್ವಲ್ಪ ದಿನಕ್ಕೇನೆ ಅಪ್ಪ ಮರುಮದುವೆಯಾದಾಗ ಮೂಡಿದ ತಿರಸ್ಕಾರ ಭಾವನೆ ಹೋಗಲಾಡಿಸಲು ಹಿಡಿದ ಸಮಯ? ಊರಿನಿಂದ, ಅಪ್ಪನಿಂದ, ಬಂಧು ಬಳಗದವರಿಂದ ದೂರವಿದ್ದ ಆದಿತ್ಯ ಪ್ರೀತಿಸಿದ್ದು ಸುಂದರಿ ಇಳಾನ. ಎಲ್ಲವೂ ಸರಿಯಾಗಿದ್ದ ಸಮಯದಲ್ಲಿ ಊರಿಗೆ ಹೋದ ಆದಿತ್ಯ ಬಿದ್ದಿದ್ದು ಪ್ರಪಾತಕ್ಕೆ! ಯೋಚಿಸದೆ ಕೊಟ್ಟ ಮಾತಿಗೆ ಪರಮಶಿವಂ ಬೆಲೆ ತೆರಬೇಕಾಯ್ತು. ಅದುವೇ ಮಗನಿಂದ ಬೇರೊಂದು ಹುಡುಗಿಗೆ ತಾಳಿ ಕಟ್ಟೋದು.ಅಷ್ಟಕ್ಕೂ ಆದಿತ್ಯನ್ಯಾಕೆ ಇದಕ್ಕೆ ಒಪ್ಪಿದ ಅಂತೀರಾ?ಇಲ್ಲಿ ಎರಡು ತೆರನಾದ ಅಪ್ಪ ಮಗನ ಸಂಬಂಧವನ್ನು ಕಾಣಬಹುದು.. ಮಾನಸಿಕವಾಗಿ, ದೈಹಿಕವಾಗಿ ಎಷ್ಟೇ ದೂರವಿದ್ದರೂ ಅಪ್ಪ ಇತರರೆದುರಿಗೆ ತಲೆ ತಗ್ಗಿಸಬಾರದೆಂದು ರುಕ್ಮಿಣಿಯನ್ನು ವಿವಾಹವಾಗುವ ಆದಿತ್ಯ ಒಂದೆಡೆಯಾದರೆ, ಅವನ ಗೆಳೆಯ ಉತ್ತಪ್ಪನಿಗೆ ಸಣ್ಣವಯಸ್ಸಿನಿಂದಲೂ ಸುಕನ್ಯಾಳಿಗೆ ಕೊಟ್ಟು ಮದುವೆ ಮಾಡುವುದೆಂದರೂ, ಅವನು ಮಾತ್ರ ತನ್ನ ಆಸೆಗಳಿಗೆ ಇವರೆಲ್ಲ ಅಡ್ಡಿಯಾದ ಶತ್ರುಗಳೆಂದು ಭಾವಿಸುವವ ಇನ್ನೊಂದೆಡೆ.. ಹೊರಗೆಷ್ಟೇ ಅಸಮಾಧಾನವಿದ್ದರೂ ಅಪ್ಪನ ಬಗ್ಗೆ ಹೃದಯಾಂತರಾಳದಲ್ಲಿ ಪ್ರೀತಿ ಇಲ್ಲದೆ ಹೋದೀತೆ?ಆದಿತ್ಯನ ಮದುವೆಯಾಗುವ ಆಸೆ ಹೊತ್ತ ಇಳಾಳ ಕನಸುಗಳು, ಈ ತರಹದ ಹುಡುಗಿಯರೂ ಇದ್ದಾರ! ಹಲವಾರು ಕಾರಣಗಳಿಂದ ಇಳಾ ಓದುಗರಿಗೆ ಇಷ್ಟವಾಗುತ್ತಾಳೆ.. ಕಾಲೇಜ್ ಹುಡುಗಿಯಾದರೂ ಅವಳ ಸರಳತೆ, ಅಪ್ಪನ ಬಗ್ಗೆ ಅಗಾಧ ಪ್ರೀತಿ, ಆದಿತ್ಯನೊಂದಿಗಿನ ಪರಿಶುದ್ಧ ಪ್ರೇಮ, ಅದಕ್ಕಿಂತಲೂ ಮಿಗಿಲಾದ ಭಾವ.. ಮನುಷ್ಯನ ಹಾರಾಟ ಭೂಮಿಯನ್ನು ಛಿದ್ರಛಿದ್ರ ಮಾಡಿದರೂ, ಕೊನೆಗೆ ಅವಳೇ ಕ್ಷಮಿಸುತ್ತಾಳೆ ಅಲ್ಲವೇ.ಭೂತಾಯಿಯ ಹೆಸರು ಹೊತ್ತ ಇಳಾ,ಆದಿತ್ಯ ಇನ್ನೊಂದು ಮದುವೆಯಾದಾಗ ಕ್ಷಮಯಾಧರಿತ್ರಿಯಾಗುವಳೇ? ಪರಮಶಿವಂ ತಮ್ಮ ತಪ್ಪನ್ನು ತಿದ್ದಿಕೊಂಡರೇ? ಉತ್ತರ 'ಕೋಗಿಲೆ ಹಾಡಿತು' ಕಾದಂಬರಿಯಲ್ಲಿದೆ.
©2024 Book Brahma Private Limited.