ನನ್ನ ದೇವರು ಹೆಣ್ಣು ಕೃತಿಯ ಮೂಲ ಲೇಖಕರು ನೂರ್ ಜಹೀರ್. ಇದರ ಕನ್ನಡ ಅನುವಾದವನ್ನು ಅಬ್ದುಲ್ ರೆಹಮಾನ್ ಪಾಷ ಎಂ ಮಾಡಿದ್ದಾರೆ.
ಸಂಪ್ರದಾಯಸ್ಥ ಮುಸ್ಲಿಮ್ ಕುಟುಂಬದಿಂದ ಬಂದ ಸಫಿಯಾ ತನ್ನ ಉದಾರವಾದಿ ಪತಿ ಅಬ್ಬಾಸ್ ನ ಉತ್ತೇಜನದಿಂದ ನಿರ್ದಿಷ್ಟ ನಿಲುವು ಮತ್ತು ಆತ್ಮಸ್ಥೈರ್ಯವನ್ನು ತಾಳಿ, ಎಲ್ಲ ಬಗೆಯಲ್ಲಿ ವಿಮೋಚಿತರಾದ ಮಹಿಳೆಯರ ಸಬಲತೆಯಿಂದಲೇ ಶಕ್ತಿ ಪಡೆಯುವ ಮುಕ್ತ ಭಾರತದ ಕನಸನ್ನು ಕಾಣುತ್ತಾಳೆ. ಸ್ವಾತಂತ್ರ್ಯ ಪೂರ್ವದ ಒಂದೆರಡು ವರ್ಷಗಳಿಂದ ಹಿಡಿದು ಪ್ರಸಿದ್ಧ ಶಾಹ್‍ಬಾನೂ ಪ್ರಕರಣದವರೆಗಿನ ಪ್ರಕ್ಷುಬ್ಧ ಭಾರತದ ಪರಿಸರದಲ್ಲಿ ಕಥೆಯು ನೆಲೆಗೊಳ್ಳುತ್ತದೆ. ಹೋರಾಟದ ಹಾದಿಯಲ್ಲಿ ಪತಿ-ಪತ್ನಿ ಇಬ್ಬರೂ ಸಾಯುತ್ತಾರೆ.
ಬೆಳಕಿಂಡಿಯಾಗದ ವ್ಯವಸ್ಥೆ ; ವ್ಯಾಖ್ಯೆ ಮೀರಿದ ಪ್ರೀತಿ
ತಾಂತ್ರಿಕವಾಗಿ ಹೇಳುವುದಾದರೆ, ಇಲ್ಲಿ ಹೇಳಲು ಹೊರಟಿರುವ ಎರಡು ಪುಸ್ತಕಗಳ ವಸ್ತುವಿಷಯಗಳು ಈಗಿನ ದಿನಮಾನಕ್ಕೆ ಅಪ್ರಸ್ತುತ ಎನಿಸುತ್ತವೆ. ತ್ರಿವಳಿ ತಲಾಖ್ ಮತ್ತು ಗಂಡು- ಹೆಣ್ಣಿನ ನಡುವಿನ ಸಂಬಂಧದ ಹೂರಣ ಕ್ರಮವಾಗಿ ಈ ಪುಸ್ತಕಗಳ ಕಥಾವಸ್ತು. ಆದರೆ, ತ್ರಿವಳಿ ತಲಾಖ್ ದೇಶದಲ್ಲಿ ನಿಷೇಧವಾಗಿದೆ; ವ್ಯಭಿಚಾರ ಅಪರಾಧವಲ್ಲ ಎಂದು ಸರ್ವೋಚ್ಚ ನ್ಯಾಯಾಲಯವೇ ಷರಾ ಬರೆದಿದೆ- ಹೀಗೆಂದು ಹೇಳಿ ಒಂದೇ ವಾಕ್ಯದಲ್ಲಿ ತಳ್ಳಿಹಾಕಿಬಿಡಬಹುದಾದ ಸಂಗತಿಗಳಂತೂ ಇವಲ್ಲ. ಸಾಮಾಜಿಕವಾಗಿ, ನೈತಿಕವಾಗಿ ಈ ಸಂಗತಿಗಳಿಗೆ ಸಾವಿಲ್ಲ ಎಂಬುದು ಸೂರ್ಯಸ್ಪಷ್ಟ. ಸಂಪ್ರದಾಯವಾದಿ ಮತ್ತು ಉದಾರವಾದಿ ನಿಲುವುಗಳ ನಡುವಿನ ತಾಕಲಾಟ ಲಾಗಾಯ್ತಿನಿಂದಲೂ ಇದ್ದದ್ದೇ. ಅದರಲ್ಲೂ ಮೂಲಭೂತವಾದ ಕೊಂಚ ಹೆಚ್ಚೇ ವಿಜೃಂಭಿಸುವ ಮುಸ್ಲಿಂ ಸಮುದಾಯದಲ್ಲಿ ಕಾಲನ ಮುಳ್ಳು ಆಧುನಿಕ ಗಡಿಯಾರದಲ್ಲೂ ಸ್ತಬ್ದವಾಗಿಬಿಟ್ಟಿದೆಯೇನೋ ಎಂಬಂತೆ ಭಾಸವಾಗುತ್ತದೆ. ಅಷ್ಟಾದರೂ, ಆ ಮುಳ್ಳಿಗೆ ಚಲನಶೀಲತೆ ತಂದುಕೊಡುವ ಪ್ರಯತ್ನ ತನ್ನೆಲ್ಲ ಇತಿಮಿತಿಗಳ ನಡುವೆಯೂ ಅವಿರತವಾಗಿ ನಡೆಯುತ್ತಲೇ ಬಂದಿರುವುದನ್ನು ನೂರ್ ಜಹೀರ್ ಅವರ 'ನನ್ನ ದೇವರು ಹೆಣ್ಣು' ಪುಸ್ತಕ ಮತ್ತೊಮ್ಮೆ ಸಾಬೀತುಪಡಿಸಿದೆ. ಅವಿಭಜಿತ ಭಾರತದಲ್ಲಿ ಪ್ರತಿಷ್ಠಿತ ಮುಸ್ಲಿಂ ಕುಟುಂಬವೊಂದರಲ್ಲಿನ ಸಂಪತ್ತಿನ ಮೇಲಾಟದೊಂದಿಗೆ ಆರಂಭವಾಗುವ ಈ ಕಥನ, ದೇಶದೊಟ್ಟಿಗೇ ಇಬ್ಬಾಗವಾಗುವ ಮನಸ್ಸುಗಳ ತಾಕಲಾಟ, ಉದಾರವಾದಿ ಚಿಂತಕರನ್ನು ಹೊಸಕಿಹಾಕುವ ರಾಜಕೀಯ ವ್ಯವಸ್ಥೆಯನ್ನು ಸಮರ್ಥವಾಗಿ ಚಿತ್ರಿಸುತ್ತದೆ. ತಾವು ಈ ಪುಸ್ತಕ ಬರೆಯುವಾಗ ಭೀತಿಗೆ ಒಳಗಾಗಿದ್ದುದಾಗಿ ಮುನ್ನುಡಿಯಲ್ಲಿ ನೂರ್ ಬರೆದುಕೊಂಡಿದ್ದಾರೆ. ಆದರೆ ಆ ಭೀತಿಯನ್ನು ಮೆಟ್ಟಿ, ತಮ್ಮ ಸಮುದಾಯದ ಹೆಣ್ಣುಮಕ್ಕಳ 'ಧರ್ಮಸಂಕಟಗಳಿಗೆ ಅವರು ಧ್ವನಿಯಾಗಿರುವುದು, ವೈರುಧ್ಯಗಳಿಂದ ಕೂಡಿರುವ ಶರಿಯತ್ ಕಾನೂನಿಗೆ. ಅವಶ್ಯವಾಗಿ ಆಗಬೇಕಾಗಿರುವ ಪರಿಷ್ಕರಣೆಯನ್ನು ಬಲವಾಗಿ ಪ್ರತಿಪಾದಿಸಿರುವುದು ಈ ಪುಸ್ತಕದ ವೈಶಿಷ್ಟ್ಯ.
ನೀಳಾ ಎಂ. ಎಚ್
8 ಡಿಸೆಂಬರ್ 2019, ಕೃಪೆ : ಪ್ರಜಾವಾಣಿ
©2024 Book Brahma Private Limited.