ಖ್ಯಾತ ಚಿಂತಕ ಕೆ.ಎಂ. ಮುನಷಿ ಅವರ ಕಾದಂಬರಿಯನ್ನು ಹಿರಿಯ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಅನುವಾದದ ಕುರಿತು ಸ್ವತಃ ಮುನಷಿ ಅವರು ‘ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ಯರು ಭಗವಾನ್ ಕೌಟಿಲ್ಯ ವೆಂಬ ನನ್ನ ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡಿ ನನ್ನ ಆಳವಾದ ಕೃತಜ್ಞತೆಗೆ ಪಾತ್ರರಾಗಿದ್ದಾರೆ. ಇದು ಪ್ರೀತಿಯಿಂದ ಮಾಡಿರುವ ಕಾರ್ಯ. ಇದಕ್ಕೆ ನನ್ನ ಸಮರ್ಥನೆಯಾಗಲೀ ಪ್ರಶಂಸೆಯಾಗಲೀ ಅವಶ್ಯಕವಿಲ್ಲ. ಶ್ರೀ ಅಯ್ಯಂಗಾರರು ಕನ್ನಡದಲ್ಲಿ ಅನೇಕ ಗ್ರಂಥಗಳನ್ನು ಬರೆದು ಪ್ರಸಿದ್ಧರಾದವರು. ಭಗವಾನ್ ಕೌಟಿಲ್ಯ ಕನ್ನಡಿಗರಿಗೆ ಪ್ರಿಯವಾಗುವುದರಲ್ಲಿ ಸಂದೇಹವಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ನಂದರ ರಾಜವಂಶ, ಚಾಣಕ್ಯ, ಚಂದ್ರಗುಪ್ತ, ಅಂದಿನ ಕಾಲದ ಜನಜೀವನ ಹೀಗೆ ಇತಿಹಾಸದ ಚಿತ್ರಣವನ್ನು ಸಮರ್ಥವಾಗಿ ಕಟ್ಟಿಕೊಡುವ ವಿಷಯ ವಸ್ತುವನ್ನು ಒಳಗೊಂಡಿದೆ. ಸರಳ ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ಜನಪ್ರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಗೊರೂರು ಗ್ರಾಮದಲ್ಲಿ 1904ರ ಜುಲೈ 4ರಂದು ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ ತಾಯಿ ಲಕ್ಷ್ಮಮ್ಮ. ಗೊರೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಹಾಸನದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಅನಂತರ ಗುಜರಾತ್ ಗಾಂಧಿ ಆಶ್ರಮದಲ್ಲಿದ್ದ ವಿದ್ಯಾ ಪೀಠದಲ್ಲಿ ಓದು ಮುಂದುವರೆಸಿದರು. ಅನಂತರ ಪತ್ರಿಕಾರಂಗ ಪ್ರವೇಶಿಸಿದರು. ಮದರಾಸಿನ `ಲೋಕಮಿತ್ರ’ ಆಂಧ್ರ ಪತ್ರಿಕೆ `ಭಾರತಿ’ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದರು. 1952ರಲ್ಲಿ ವಿಧಾನಸಭೆಗೆ ನಾಮಕರಣಗೊಂಡಿದ್ದ ಅವರು ಅದಕ್ಕೂ ...
READ MORE