ಕೇತ್ಕರ್ ವಹಿನಿ ಶೀರ್ಷಿಕೆಯಡಿ ಲೇಖಕಿ ಉಮಾ ಕುಲಕರ್ಣಿ ಅವರು ಮರಾಠಿಯಲ್ಲಿ ಬರೆದ ಕಾದಂಬರಿಯನ್ನು ಲೇಖಕ ವಿರೂಪಾಕ್ಷ ಕುಲಕರ್ಣಿ ಅವರು ಧೀರೆ (ಕೇತ್ಕರ್ ವಹಿನಿ) ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮದುವೆ ನಂತರ ನಗರ ಪ್ರದೇಶದಿಂದ ದೂರದ ಹಳ್ಳಿಗೆ ಹೋಗುವ ಬಾಲಿಕೆಯ ಕಥೆ ಇದು. ಗ್ರಾಮೀಣ ಪ್ರದೇಶದಲ್ಲಿ ಹೆಣ್ಣುಮಕ್ಕಳಿಗೆ ಆಗುವ ಎಲ್ಲ ರೀತಿಯ ಅನ್ಯಾಯದ ವಿರುದ್ಧ ಈಕೆ ಹೋರಾಟ ಮಾಡುತ್ತಾಳೆ. ಈ ಮಧ್ಯೆ, ಆಕೆಯ ಪತಿ ಹತ್ಯೆಗೆ ಈಡಾಗುತ್ತಾನೆ. ಕಾನೂನು ಹೋರಾಟವೂ ಮಾಡುತ್ತಾಳೆ. ಹೆಣ್ಣಿನ ಹೋರಾಟದ ಸ್ವರೂಪ, ಹೆಣ್ಣು ಮನಸ್ಸು ಮಾಡಿದರೆ ಅವಳ ಧೈರ್ಯ, ಪ್ರತಿಪಾದನೆ-ಸಮರ್ಥಿಸಿಕೊಳ್ಳುವ ವೈಖರಿ, ಸ್ವಾವಲಂಬಿ ಬದುಕಿನ ಸ್ಥೈರ್ಯ ದಂಗು ಬಡಿಸುತ್ತದೆ ಎನ್ನುವುದನ್ನು ಈ ಕಾದಂಬರಿ ಪುರುಷ ಸಮಾಜಕ್ಕೆ ಎಚ್ಚರಿಕೆ ನೀಡುತ್ತದೆ. ಹೆಣ್ಣುಮಕ್ಕಳು ತಮ್ಮ ಮೇಲಿನ ಶೋಷಣೆಯನ್ನು ಹೇಗೆ ಕೊನೆಗಾಣಿಸಬೇಕು ಎಂಬುದರ ಒಳನೋಟ ನೀಡುತ್ತದೆ.
ವಿರೂಪಾಕ್ಷ ಕುಲಕರ್ಣಿ ಅವರ ಊರು ಬೆಳಗಾವಿ. 1962ರಿಂದ ಮಹಾರಾಷ್ಟ್ರದಲ್ಲಿ ವಾಸಿಸುತ್ತಿದ್ದಾರೆ. ಮೊದಲಿನ ಒಂದೆರಡು ವರ್ಷ ಮುಂಬಯಿಯ ಬಿ. ಈ.ಎಸ್.ಟಿ.ಯಲ್ಲಿ ತರುವಾಯ ಇಂದಿನವರೆಗೆ ಪುಣೆಯ ಭಾರತ ಸರಕಾರದ ಹಾಯ್ ಎಕ್ಸ್ ಪ್ಲೋ ಸಿವ್ಹ ಕಾರಖಾನೆಯಲ್ಲಿ ಇನ್ ಸ್ಟ್ರೂಮೆಂಟ್ ಇಂಜಿನೀಯರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ಸಾಹಿತ್ಯ, ಸಂಗೀತಗಳಲ್ಲಿ ಆಸಕ್ತಿ ಹೊಂದಿರುವ ಅವರು ಕನ್ನಡ ನಾಡು-ನುಡಿಗಳನ್ನು ಕುರಿತು ಮರಾಠಿಯ ಪತ್ರಿಕೆ ಹಾಗೂ ನಿಯತಕಾಲಿಕೆಗಳಲ್ಲಿ ಅವ್ಯಾಹತ ಲೇಖನಗಳನ್ನು ಬರೆದಿದ್ದಾರೆ. ಜೊತೆಗೆ ಅನುವಾದದಲ್ಲಿಯೂ ತೊಡಗಿಕೊಂಡಿರುವ ಅವರು ಕನ್ನಡ ಹಾಗೂ ಮರಾಠಿ ಭಾಷೆಯ ಬಾಂಧವ್ಯ ಬೆಸೆಯುವಂತಹ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ...
READ MORE