ಈ ಕಾದಂಬರಿಯ ಕೆಲವು ಸಾಲುಗಳು ಹೀಗಿವೆ. ಸುತ್ತಲು ಕವಿದಿರುವ ಮಂಜು ಇಂದ್ರಜಾಲದಂತೆ ಎಲ್ಲವನ್ನು ಮರೆಸಿತ್ತು. ಸೂರ್ಯ ಮೇಲೇರಿದಂತೆ ಮೋಹಕ ಇಬ್ಬನಿ ಅವಕುಂಠನ ಸರಿಸಿ ಪ್ರಕೃತಿಯ ಅಸಾಧಾರಣ, ಅದ್ಭುತ, ಅನನ್ಯವಾದ ಸೌಂದರ್ಯ ದರ್ಶನ ಮಾಡಿಸಿತ್ತು. ದೊಡ್ಡ, ಚಿಕ್ಕ, ಎಲೆಗಳ ಮೇಲೆ ಮಂಜಿನ ಮಣಿಗಳು. ಎಲ್ಲಿ.... ಎಲ್ಲಿ... ನೋಡಿದರೂ ರಾಶಿಗಟ್ಟಲೆ ಹಿಮದ ಬಿಂದುಗಳು.‘ಇದೇ ಹೇಮಂತದ ಸೊಬಗು. ಈ ರಾಶಿಗಟ್ಟಲೆ ಹಿಮದ ಬಿಂದುಗಳು ಅಲ್ಪಕಾಲ ಮಿನುಗಿ ಅದು ಬಿಸಿಲೇರಿದಂತೆ ಮರೆಯಾಗಿ ಬಿಡುತ್ತದೆ. ಅನುಭವ ಮಾತ್ರ ದಟ್ಟವಾದದ್ದು. ಇದು ನನಗೆ ಇಷ್ಟ. ಶಾಂತಿಗೂ ಕೂಡ ಇಷ್ಟ. ಹೇಮಂತದ ಸೊಬಗಿನಂತೆ ಅನನ್ಯ. ಅವಳ ಮತ್ತು ನನ್ನ ಸ್ನೇಹಕ್ಕೆ ಇತಿಹಾಸ ಮಾತ್ರವಲ್ಲ, ವರ್ತಮಾನ, ಜೊತೆ ಭವಿಷ್ಯವೂ ಕೂಡ ಇರುತ್ತೆ. ನನಗೆ ಪ್ರಿಯವಾದ ಹೇಮಂತದ ಸೊಗಸನ್ನ ಸ್ಮರಿಸಬೇಕೆಂದೇನಿಲ್ಲ. ಆಯ್ಕೆ ನಿಂದೆ. ಅನರ್ಥಗಳು ಸೃಷ್ಟಿಸೋದು ಬೇಡ. ನಮ್ಮಿಬ್ಬರ ದಾರಿ ಇಲ್ಲಿಂದಲೇ ಕವಲೊಡೆಯಲಿ’ ಪ್ರಭು ಅತ್ಯಂತ ಸರಳವಾಗಿ ಹೇಳೀದ. ಅದು ಅವರ ಸ್ವಭಾವ.ಸವಿತಾಗೂ ಕೂಡ ಹೇಮಂತದ ಸೊಗಸು ಇಷ್ಟವಾಗಿರಬೇಕು. ಇಲ್ಲ ಬಲವಂತದ ಇಷ್ಟವೇ! ಸಾಮರಸ್ಯಕ್ಕೆ ಒಂದು ಉದಾಹರಣೆ. ಅದಕ್ಕೊಂದು ಅರ್ಥ ಪ್ರಭು!
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE