ತೆತ್ಸುಕೊ ಕುರುಯಾನಾಗಿ ಅವರು ಇಂಗ್ಲಿಷಿನಲ್ಲಿ ಬರೆದ ಕಾದಂಬರಿಯನ್ನು ಲೇಖಕಿ ವಿ.ಗಾಯತ್ರಿ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ತೊತ್ತೊ-ಚಾನ್. ‘ಅರಳಲಿ ಹೂಗಳು ನೂರಾರು, ನಡೆಯಲಿ ವಿಚಾರ ಸಂಘರ್ಷಗಳು ಸಾವಿರಾರು’ ಎಂಬುದು ಕೃತಿಯ ಬೆನ್ನುಡಿಯಲ್ಲಿ ಉಲ್ಲೇಖಿಸಿದ ಸಾಲುಗಳಿವು. ಈ ಸಾಲುಗಳೇ ಕೃತಿಯ ಸ್ವರೂಪ-ಸ್ವಭಾವವನ್ನು ತಿಳಿಸುತ್ತವೆ. ಮಕ್ಕಳ ಕುತೂಹಲ ತಣಿಸುವ ಉದ್ದೇಶದ ಈ ಕೃತಿಯು, ಶಾಲಾ ವಾತಾವರಣ, ಶಾಲೆಯ ಆಟ-ಪಾಠಗಳು, ತರಗತಿಯ ಆಕರ್ಷಣೆ, ಸಮವಸ್ತ್ರಗಳ ಸಮರ್ಥನೆ ಇತ್ಯಾದಿಗಳ ಚಿತ್ರಣ ನೀಡುತ್ತದೆ. ಪಠ್ಯಕ್ರಮಕ್ಕಿಂತ ಮಕ್ಕಳಿಗೆ ಬೇಕಾದ ಸ್ವಾದಿಷ್ಟ ಊಟದ ಬಗ್ಗೆ ಹೆಚ್ಚಿನ ಕಾಳಜಿ, ಎಲ್ಲ ಮಕ್ಕಳು ಸಂಗೀತ ಕಲಿಯಬೇಕು, ಆಟವಾಡಬೇಕು, ಬೇಸಿಗೆಯಲ್ಲಿ ಹೊರಗೆ ಶಿಬಿರಗಳನ್ನು ಸಂಭ್ರಮಿಸಬೇಕು, ಬಿಸಿನೀರಿನ ಬುಗ್ಗೆಯಲ್ಲಿ ನಡೆದಾಡಬೇಕು, ನಾಟಕ ಆಡಬೇಕು, ಬಯಲಿನಲ್ಲಿ ಅಡುಗೆ ಮಾಡುವ ಆನಂದ ಅನುಭವಿಸಬೇಕು. ಹಾಡು ಹೇಳಬೇಕು, ಆಟವಾಡಬೇಕು ಇತ್ಯಾದಿ ಚಟುವಟಿಕೆಗಳು ಶಿಕ್ಷಣದ ಭಾಗವಾಗಬೇಕು ಎಂಬ ಎಚ್ಚರಿಕೆಯನ್ನು ಈ ಕೃತಿ ನೀಡುತ್ತದೆ. ಇದರಿಂದ, ಮಕ್ಕಳ ಸೃಜಶೀಲತೆ, ಕ್ರಿಯಾಶೀಲತೆ, ಪ್ರಯೋಗಶಿಲತೆ ಹೆಚ್ಚುತ್ತದೆ ಎಂಬುದು ಈ ಕೃತಿಯ ಸಂದೇಶವಾಗಿದೆ. ಪುಟ್ಟ ಹುಡುಗಿ ತೊತ್ತೊ-ಚಾನ್, ದೊಡ್ಡವಳಾಗಿ ತೆತ್ಸುಕೋ ಕುರೋಯಾನಾಗಿ ಎಂಬ ಹೆಸರಿನಲ್ಲಿ ಜಪಾನಿನಾದ್ಯಂತ ಪ್ರಸಿದ್ಧಿ ಪಡೆದ ಟೆಲಿವಿಷನ್ ಕಲಾವಿದೆ. ಜಪಾನಿನಿಂದ ಯುನಿಸೆಫ್ ನ ಸದ್ಭಾವನಾ ರಾಯಬಾರಿಯಾಗಿ ನೇಮಕಗೊಂಡಿದ್ದಳು. ಅಜ್ಜ-ಅಜ್ಜಿ-ತಂದೆ-ತಾಯಿ ಒಟ್ಟಿನಲ್ಲಿ ದೊಡ್ಡವರೆನಿಸಿಕೊಂಡವರು ಮಕ್ಕಳಿಂದ ಕಲಿಯುವುದು ಬಹಳಷ್ಟಿದೆ ಎಂಬುದನ್ನು ಹೇಳಲು ಈ ಕಾದಂಬರಿ ಬರೆದಿದ್ದರು. ಮಕ್ಕಳೇ ಪ್ರಧಾನ ಪಾತ್ರದಲ್ಲಿರುವ ಒಂದು ಕಾದಂಬರಿ ತೊತ್ತೊ-ಚಾನ್ .
©2024 Book Brahma Private Limited.