ರಾಜಕೀಯ ವಿದ್ಯಾಮಾನಗಳಲ್ಲಿ ದಲಿತ ಸಂವೇದನೆಯನ್ನು ಪ್ರತಿಬಿಂಬಿಸುವ ವಿರಳ ಕಥಾವಸ್ತುವುಳ್ಳ ಕಾದಂಬರಿ ಇದು. ಮರಾಠಿಯ ಪ್ರಸಿದ್ಧ ಲೇಖಕರಾದ ಡಾ. ಶರಣಕುಮಾರ್ ಲಿಂಬಾಳೆ ಅವರು ಮರಾಠಿಯಲ್ಲಿ ಬರೆದ ‘ಉಪಲ್ಯಾ’ ಕಾದಂಬರಿಯ ಕನ್ನಡಾನುವಾದವನ್ನು ಲೇಖಕಿಯಾದ ಪ್ರಮಿಳಾ ಮಾಧವ್ ಅವರು ಸೊಗಸಾಗಿ ಮಾಡಿದ್ದಾರೆ. ರಾಜಕೀಯ ಸಂಘರ್ಷಗಳಲ್ಲಿ ಅದು ಬದಲಾಯಿಸುವ ಮಗ್ಗುಲುಗಳ ಕುರಿತು ಬರೆದಂತಹ ಕಾದಂಬರಿ ಇದು. ರಾಜಕೀಯ ಸಾಮಾನ್ಯವಾಗಿ ಕಾಣ ಸಿಗುವ ಅಮಾನವೀಯ ಘಟನೆಗಳು, ಅಮಾಯಕ ಜನರ ಬಲಿದಾನ, ಪುರೋಹಿತಶಾಹಿ ಮೇಲ್ವರ್ಗದ ಅಧಿಕಾರಿಗಳ ಮತ್ತು ರಾಜಕೀಯ ಫುಡಾರಿಗಳ ಧೋರಣೆ ಮತ್ತು ದೊಂಬರಾಟದ ಕುರಿತಾಗಿ ಮನಮುಟ್ಟುವಂತೆ ಲೇಖಕರು ವಿವರಿಸಿದ್ದಾರೆ. ಸಮಾಜ ಸುಧಾರಣೆಗೆ ದಿಕ್ಸೂಚಿಯಾಗಬಲ್ಲ ವಿಷಯಗಳ ಕುರಿತು ಈ ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ. ದಲಿತ ಆಂದೋಲನ, ಅಲ್ಲಲ್ಲಿ ಹುಟ್ಟಿಕೊಂಡ ದಲಿತ ಸಂಘಟನೆಗಳು, ಪಟ್ಟಭದ್ರ ಹಿತಾಸಕ್ತಿಗಳ ದ್ವಂದ್ವನೀತಿ, ಸಮಯಸಾಧಕತನ ಹೀಗೆ ಹಲವು ವಿಷಯಗಳ ಕುರಿತು ಕಣ್ಣಿಗೆ ಕಟ್ಟುವ ರೀತಿಯಲ್ಲಿ ನಿರೂಪಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಕೇವಲ ನಕಾರಾತ್ಮಕ ಅಂಶಗಳಲ್ಲಿ ಕಾದಂಬರಿಯನ್ನು ಮುಗಿಸದೇ, ನಕಾರಾತ್ಮಕ ಅಂಶಗಳನ್ನು ಮೆಟ್ಟಿ ನಿಲ್ಲಲು ಸಹಾಯಕವಾಗುವಂತಹ ಬಹುಪಯುಕ್ತವಾದ ಸಂದೇಶವನ್ನು ಈ ಕೃತಿಯ ಮೂಲಕ ಲೇಖಕರು ನೀಡಿದ್ದಾರೆ.
©2024 Book Brahma Private Limited.