`ಮಿಖಾಯಲ್ ಎಂಡ ಮೊಮೊ’ ಕೃತಿಯು ಜಯಶ್ರೀ ಕಾಸರವಳ್ಳಿ ಅವರ ಅನುವಾದಿತ ಕಾದಂಬರಿಯಾಗಿದೆ. ‘ಟೈಮ್’ ಎಂಬ ವಿಷಯವನ್ನು ಪ್ರಧಾನ ವಸ್ತುವಾಗಿತ್ತುಕೊಂಡಿರುವ ಕಾದಂಬರಿ ಇದಾಗಿದ್ದು, ಆಧುನಿಕ ಜೀವನ ಶೈಲಿಯಲ್ಲಿ ಸಮಯವನ್ನು ಮನುಷ್ಯ ಹೇಗೆ ನಿಭಾಯಿಸುತ್ತಿದ್ದಾನೆ ಮತ್ತು ಮನುಷ್ಯನ ಅತ್ಯಂತ ಅಗತ್ಯದ ಸಮಯವನ್ನು 'ಸಮಯಗಳ್ಳರು' ಹೇಗೆ ಲಪಟಾಯಿಸುತ್ತಿದ್ದಾರೆ ಎಂಬುದರ ಸುತ್ತಲೇ ಇದೆ. ಮನುಷ್ಯ ತನ್ನರಿವಿಲ್ಲದೇ ಕಳೆದುಕೊಳ್ಳುತ್ತಿರುವ ತನ್ನದೇ ಅಮೂಲ್ಯ ಸಮಯವನ್ನು ಪುಟ್ಟ ಮೊಮೊ ಹೇಗೆ ತನ್ನೆಲ್ಲಾ ಸಾಹಸಯಾತ್ರೆಯ ಮೂಲಕ ಮನುಷ್ಯನ ಬದುಕಿಗೆ ತಂದು ಕೊಡುತ್ತಾಳೆಂಬ ರೋಚಕ ವಿಷಯಕ್ಕೆ ಮುಕ್ಕಾಗದಂತೆ ಅನುವಾದಿಸುವುದು ನಿಜಕ್ಕೂ ಸವಾಲೇ ಅನ್ನಿಸಿತ್ತು ಎನ್ನುತ್ತಾರೆ ಇಲ್ಲಿ ಅನುವಾದಕಿ. ಸುಮಾರು ಏಳೆಂಟು ತಿಂಗಳ ಅವಧಿ ತೆಗೆದುಕೊಂಡು ಅನುವಾದವನ್ನು ಮುಗಿಸಿದ ನಂತರ ಮನಸ್ಸಿಗೆ ನಿರಾಳವೆನ್ನಿಸಿತು. ಇಂಗ್ಲಿಷ್ ಅನುವಾದದಲ್ಲಿರುವ ಸುಧೀರ್ಘ ವಾಕ್ಯಗಳನ್ನು ಎಲ್ಲೂ ಕತ್ತರಿಸದೇ, ಕನ್ನಡಕ್ಕೆ ಹೊಸದೇ ಅನ್ನಿಸುವಂತಹ ಕೆಲವೊಂದು ಪದ ಹಾಗೂ ಪ್ರಯೋಗದೊಂದಿಗೆ ಇದೀಗ ಕಾದಂಬರಿ ಸಿದ್ಧವಾಗಿದೆ. ಇದು ಹದಿನೇಳು, ಹದಿನೆಂಟು ವರುಷದ ಮಕ್ಕಳಿಗಷ್ಟೇ ಅಲ್ಲ, ಹಿರಿಯರು ಕೂಡಾ ಅಷ್ಟೇ ಆಸ್ಥೆ ಹಾಗೂ ಕುತೂಹಲದಿಂದ ಓದುವಷ್ಟು ವಿವರಗಳನ್ನು ಒಳಗೊಂಡಿದೆ.
'ತಂತಿ ಬೇಲಿಯ ಒಂಟಿ ಕಾಗೆ' ಕಥಾ ಸಂಕಲನದ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದ ಜಯಶ್ರೀ ಕಾಸರವಳ್ಳಿ ಅವರು ಮೊದಲ ಕೃತಿಗೇ ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಮಲ್ಲಿಕಾ ಪ್ರಶಸ್ತಿ ಹೀಗೆ ಕೆಲವು ಪ್ರಶಸ್ತಿ ಪಡೆದಿದ್ದಾರೆ. ಮಾರ್ಕೆಸ್ ಸೇರಿದಂತೆ ಹಲವು ಖ್ಯಾತ ಕತೆಗಾರರ ಕತೆಗಳನ್ನು ಜಯಶ್ರೀ ಕನ್ನಡಕ್ಕೆ ಅನುವಾದಿಸಿದ್ದಾರೆ. ನವದೆಹಲಿಯ 'ತುಲಿ ಕಾ' ಪ್ರಕಾಶನದ ಹತ್ತಕ್ಕೂ ಹೆಚ್ಚು ಮಕ್ಕಳ ಪುಸ್ತಕಗಳನ್ನು ಅವರು ಕನ್ನಡೀಕರಿಸಿದ್ದಾರೆ. ...
READ MORE