ತಮಿಳಿನ ಮಹತ್ವದ ಕಾದಂಬರಿಕಾರ ಕಾರ್‍ಲೋಸ್ (ತಮಿಳವನ್) ಬರೆದ ಕೃತಿ ’ವಾರ್ಸಾದಲ್ಲೊಬ್ಬ ಭಗವಂತ’. ೨೦೦೮ರಲ್ಲಿ ಕಾದಂಬರಿ ಹೊರಬಂತು. ಇದಕ್ಕೂ ಮೊದಲು 'ಇವರು ಕಥೆಯಾದವರು’ ಕೃತಿ ಮೂಲಕ ಭಾರತೀಯ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದರು ಕಾರ್‍ಲೋಸ್. ತಮಿಳಿನಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಜಯಲಲಿತಾ.
’ಅನಿಕೇತನ’ ಜಾಲತಾಣದಲ್ಲಿ ಕೃತಿಯ ಕುರಿತು ಪ್ರಸ್ತಾಪಿಸಿರುವ ಲೇಖಕ ವೆಂಕಟೇಶ್ ನೆಲ್ಲುಕುಂಟೆ, ’ಉಂಬೆರ್ಟೊ ಇಕೋ ಬಹುವಾಗಿ ಬಳಸುವ ಸಂಕೇತವಾದದಿಂದ ಆಳವಾಗಿ ಪ್ರಭಾವಿತಗೊಂಡವರಂತೆ ಬರೆಯುವ ಕಾರ್ಲೋಸ್ ರವರು ತಮ್ಮ ಸೃಜನಶೀಲತೆಯಿಂದಾಗಿ ಪ್ರಭಾವಿಸಿದ ಸಿದ್ಧಾಂತಗಳಹಂಗು ತೊರೆದು ಜೀವಂತಿಕೆಯನ್ನೂ ಕಥೆಗೆ ಸೂಕ್ಷ್ಮತೆಯನ್ನೂ ತಂದುಕೊಡಬಲ್ಲರು. ಮನುಷ್ಯನ ವರ್ತನೆಗಳನ್ನು ನಿಸರ್ಗದಂತಹ ಅಗೋಚರವಾದ ಸಂಗತಿಗಳು ನಿಯಂತ್ರಿಸುತ್ತವೆ ಎಂದು ಬಲವಾಗಿ ನಂಬಿ ಬರೆದ ತೇಜಸ್ವಿಯವರಂತೆ, ಕಾರ್ಲೋಸ್ ರವರು ಕಾಲದ ಅನಿವಾರ್ಯತೆಗಳು ಅವನನ್ನು ನಿಯಂತ್ರಿಸುತ್ತವೆ ಎಂದು ಬರೆಯುತ್ತಾರೆ. ಗೋಡೆ, ಗಡಿಯಾರ, ಮಂಚ[ಕನ್ನಡದಲ್ಲಿ ತುಸು ಮಟ್ಟಿಗೆ ದೇವನೂರರ ಕಲಾಕೃತಿಗಳಲ್ಲಿ ಈ ಮಾದರಿಯ ವಿಧಾನ ಬಳಕೆಯಾಗುತ್ತದೆ,ಅನಂತಮೂರ್ತಿಯವರ ಆರಂಭದ ಕೃತಿಗಳಲ್ಲಿ [ಭಾರತೀಪುರ,ಕೆಲವು ಕಥೆಗಳಲ್ಲಿ] ಕಾರ್ಲೋಸರ ಈ ಕೃತಿಯಲ್ಲಿ ಬರುವಂಥದೇ ಪ್ರಸಂಗಗಳು ಬರುತ್ತವೆ ಆದರೆ ಅವುಗಳಲ್ಲಿ ಪೆರಿಯಾರರ ನಿರಾಕರಣೆಯ ಮಾದರಿ ಪ್ರಭಾವ ಕಾಣುತ್ತದೆ.ನಂತರದ [ಭವ]ದಂತಹ ಕೃತಿಗಳಲ್ಲಿ ಮಧ್ಯಮವರ್ಗದ ಅನಿವಾಸಿ ಭಾರತೀಯನ ಮೂಲಭೂತವಾದಿ ‘ನಾಸ್ಟಾಲ್ಜಿಯಾ’ ಕೆಲಸ ಮಾಡುತ್ತದೆ] ಮುಂತಾದವುಗಳೊಂದಿಗೆ ಮಾತನಾಡುವ ,ಸಂವಾದ ಮಾಡುತ್ತಲೇ ಪಿಯೋತ್ತರನ ಪೈಂಟಿಂಗನ್ನು ವಿವರಿಸುವಾಗಲೆಲ್ಲ ಫ್ರಾಯ್ಡನ ಪ್ರಮೇಯಗಳು ಪ್ರಭಾವಿಸಿರುವಂತೆ ಕಾಣುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಚಿಂತಕ ಡಿ. ಡಾಮಿನಿಕ್ ಕಾದಂಬರಿಯ ಮಹತ್ವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕನ್ನಡದ ಎಲ್ಲೆಗಳನ್ನು ವಿಸ್ತರಿಸುವ ಇಂತಹ ಕೃತಿಗಳು ಕನ್ನಡ ಓದುಗರಿಗೆ ಹೆಚ್ಚು ಹೆಚ್ಚು ದಕ್ಕುವಂತಾಗಬೇಕು.
©2024 Book Brahma Private Limited.