ಪ್ರಸಿದ್ಧ ಲೇಖಕ ಆರ್.ಕೆ. ನಾರಾಯಣ ಅವರು ಬರೆದ ಕಾದಂಬರಿ ‘ಸ್ವಾಮಿ ಆಂಡ್ ಫ್ರೆಂಡ್ಸ್ ’ ಕೃತಿಯನ್ನು ಎಚ್.ವೈ. ಶಾರದಾಪ್ರಸಾದ ಅವರು ಕನ್ನಡಕ್ಕೆ ಅನುವಾದಿಸಿದ್ದೇ-ಸ್ವಾಮಿ ಮತ್ತು ಅವರ ಸ್ನೇಹಿತರು.
ಆರ್.ಕೆ. ನಾರಾಯಣ ಅವರು ಬಹುತೇಕ ತಮ್ಮ ಬರೆಹಗಳನ್ನು ಇಂಗ್ಲಿಷಿನಲ್ಲೇ ಮಾಡಿದ್ದರೂ, ಅಲ್ಲಿಯ ಪಾತ್ರಗಳು, ಅವುಳ ಸಂಸ್ಕೃತಿ, ಸಾಮಾಜಿಕ ಹಿನ್ನೆಲೆಯ ಎಲ್ಲವೂ ಭಾರತೀಯ ಗ್ರಾಮೀಣ ಪರಿಸರದ್ದೇ ಆಗಿರುತ್ತದೆ. ಆದರಿಂದ, ಅವರ ಬರೆಹವು ಬೇರೆ ಭಾಷೆಯಲ್ಲಿ ಬರೆಯಲಾಗಿದೆ ಎಂದು ಅನಿಸುವುದಿಲ್ಲ. ಈ ಬರೆಹದ ಔನ್ನತ್ಯಕ್ಕೆ ತಕ್ಕಂತೆ ‘ಸ್ವಾಮಿ ಮತ್ತು ಅವನ ಸ್ನೇಹಿತರು’ ಕಾದಂಬರಿಯ ಸಹಜ ಸ್ವರೂಪ ಹಾಗೂ ಸ್ವಭಾವಕ್ಕೆ ಧಕ್ಕೆ ಬಾರದೇ ಹಾಗೆ ಲೇಖಕರು ಅನುವಾದಿಸಿದ್ದಾರೆ. ಮೂಲ ಕಥೆಯ ಸ್ವಾದವನ್ನೇ ಅನುಭವಿಸುವಂತಿದೆ. ಸಂದರ್ಭಕ್ಕೆ ತಕ್ಕ ಹಾಗೆ ಮನೋಭಿರಾಮ ಚಕ್ರವರ್ತಿ ಅವರು ಬಿಡಿಸಿರುವ ಚಿತ್ರಗಳು ಇಡೀ ಕೃತಿಯ ಅರ್ಥವಂತಿಕೆ ಹಾಗೂ ಪರಿಣಾಮಕತೆಯನ್ನು ಹೆಚ್ಚಿಸಿದೆ. ಮೇಷ್ಟ್ರುಗಳು, ಹೋಂವರ್ಕ್, ಕ್ರಿಕೆಟ್, ಸ್ನೇಹಿತರು, ಅಜ್ಜಿ-ಹೀಗೆ ಇನ್ನೂ ಅನೇಕ ವ್ಯಕ್ತಿ ವಿಷಯಗಳು ಮಾಲ್ಗುಡಿಯ ಹತ್ತು ವರ್ಷದ ಬಾಲಕ ಸ್ವಾಮಿನಾಥನ್ ಬದುಕನ್ನು ರೂಪಿಸಿವೆ. ಸಾಹಸ ಮತ್ತು ಸೆಣಸಾಟಗಳಿಲ್ಲದ ಸ್ವಾಮಿಯ ಬದುಕು ಅಪೂರ್ಣ. ಎರಡು ಬಾರಿ ಶಾಲೆಯಿಂದ ಹೊರಹಾಕಲ್ಪಟ್ಟ ಅವನು ಒಮ್ಮೆ ಮನೆ ಬಿಟ್ಟು ಓದಿ ಹೋಗುವನು.
ದಕ್ಷಿಣ ಭಾರತದ ಮಾಲ್ಗುಡಿ ಯಲ್ಲಿ ಲೇಖಕ ಆರ್.ಕೆ.ನಾರಾಯಣ್ ಅವರ ಬಹುತೇಕ ಸಾಹಿತ್ಯ ರಚನೆಗೊಂಡಿದ್ದು ಇಲ್ಲೇ. ಇದೇ ಪರಿಸರದಲ್ಲಿ ತುಂಟ ಸ್ವಾಮಿ ಮತ್ತು ಅವನ ಸ್ನೇಹಿತರ ಜೀವಂತ ಚಿತ್ರಣ ಮೂಡಿ ಬಂದಿದೆ.
ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಈ ಕೃತಿಯನ್ನು (ಪುಟ: 206, ಬೆಲೆ: 34 ರೂ) 1995ರಲ್ಲಿ ಪ್ರಕಟಿಸಿತ್ತು.
©2024 Book Brahma Private Limited.