ಮರಾಠಿ ಭಾಷೆಯ ಪ್ರಸಿದ್ಧ ಕಾದಂಬರಿಕಾರ ಡಾ. ಶರಣಕುಮಾರ ಲಿಂಬಾಳೆ ಅವರ ಕಾದಂಬರಿಯನ್ನು ಲೇಖಕಿ ಪ್ರಮೀಳಾ ಮಾಧವ್ ಅವರು ‘ರೊಚ್ಚು’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ದಲಿತರ ಮೇಲಿನ ದೌರ್ಜನ್ಯವನ್ನು ತೆರೆದಿಡುವ ಈ ಕಾದಂಬರಿಯು ಮಹಾರ ಜಾತಿಯ ಯುವಕನೊಬ್ಬ ತನ್ನ ಜಾತಿಯ ಮಾಹಿತಿಯನ್ನು ಗುಪ್ತವಾಗಿಟ್ಟು, ಓದು ಕಲಿತು, ಅಧ್ಯಾಪಕನಾಗುತ್ತಾನೆ. ಕೊನೆಗೆ, ಈ ಸಂಗತಿ ಲೋಕಕ್ಕೆ ತಿಳಿದು ದಿಕ್ಕು ತೋಚದಂತಾಗಿ ಸಾವನ್ನಪ್ಪುತ್ತಾನೆ. ಕಥಾನಾಯಕನ ಮೂಕ ವೇದನೆಯು ಕಾದಂಬರಿಯ ವಸ್ತುವಾಗಿದೆ. ಮೇಲ್ಜಾತಿಯವರ ಕ್ರೌರ್ಯವನ್ನೂ ಸಹ ತುಂಬಾ ವಿವರವಾಗಿ ಚಿತ್ರಿಸಲಾಗಿದೆ. ದಲಿತರು ಓದು-ಬರಹ ಕಲಿತರೂ ಮೇಲ್ಜಾತಿಯವರಿಗೆ ಸಹನೆ ಇಲ್ಲ. ಅವರ ಅವಕಾಶದ ಎಲ್ಲ ಬಾಗಿಲುಗಳನ್ನು ಮುಚ್ಚಿಬಿಡುವ ಹುನ್ನಾರದಲ್ಲೇ ಮೇಲ್ಜಾತಿಯವರು ಬದುಕಿನ ಸಂತಸ ಕಾಣುತ್ತಾರೆ. ಸಮಾಜ ವ್ಯವಸ್ಥೆ ಕುರಿತ ಇಲ್ಲಿಯ ಸಂಭಾಷಣೆಗಳು ಪರಿಣಾಮಕಾರಿಯಾಗಿವೆ. ಯಾವ ರಾಜಕಾರಿಣಿಗೂ ಜಾತಿ ನಿವಾರಣೆ ಬೇಡವಾಗಿದೆ. ಅವರು ಜಾತಿ ವಿರೋಧಿಸುವುದು ಕೇವಲ ಭಾಷಣದಲ್ಲಿ. ಇಂತಹ ಸಂಗತಿಯೂ ಕಾದಂಬರಿಯಲ್ಲಿ ಸ್ಪಷ್ಟವಾಗಿ ಧ್ವನಿಸಿದೆ.
ದಲಿತ ಸಂವೇದನೆಯೇ ಪ್ರಧಾನವಾಗಿರುವ ಕಾದಂಬರಿ ‘( ವಾರ್ತಾಭಾರತಿ)
ಡಾ. ಶರಣಕುಮಾರ ಲಿಂಬಾಳೆ ಅವರ ಈ ಕೃತಿಯು ದಲಿತರ ಮೇಲಿನ ದೌರ್ಜನ್ಯವನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ಆ ಕಾಲದ ಜಾತಿ ವ್ಯವಸ್ಥೆಯನ್ನು ನಮ್ಮ ಮುಂದಿಡುತ್ತದೆ. ಮಹಾರ ಜಾತಿಯ ಯುವಕನೊಬ್ಬ ತನ್ನ ಜಾತಿ ಮುಚ್ಚಿಟ್ಟು ವಿದ್ಯಾವಂತನಾಗಿ ಅಧ್ಯಾಪಕ ವೃತ್ತಿ ಕೈಗೊಂಡು ಎಲ್ಲರೊಂದಿಗೆ ಬೆರೆತು ಕೊನೆಗೆ ಎಲ್ಲವೂ ಕೊನೆಗೆ ಎಲ್ಲವೂ ಗೊತ್ತಾಗಿ ದುರಂತ ಸಾವನ್ನು ಕಂಡ ಇಲ್ಲಿನ ಕಥಾನಾಯಕನ ಮೂಕ ವೇದನೆ ಪ್ರತಿ ಪುಟದಲ್ಲೂ ಗೋಚರಿಸುತ್ತದೆ. ಸವರ್ಣೀಯರ ಕ್ರೌರ್ಯದ ಪರಮಾವಧಿ ಈ ಕೃತಿಯಲ್ಲಿ ಎಲ್ಲೆ ಮೀರಿರುತ್ತದೆ. ದಲಿತರು ವಿದ್ಯಾವಂತರಾದರೂ ಎಲ್ಲಿಯೇ ಕಾಲಿಡಲಿ ಜಾತಿಯ ಮುಳ್ಳು ಚುಚ್ಚುತ್ತಲೇ ಇರುತ್ತದೆ. ಸಮಾಜ ವ್ಯವಸ್ಥೆಯ ಬಗೆಗಿನ ಮಾತು ಸಂಭಾಷಣೆಗಳು ಬಹಳ ತೀಕ್ಷ್ಣ ಮತ್ತು ಆಳವಾಗಿವೆ. ದಲಿತೋದ್ಧಾರ ಎನ್ನುತ್ತಲೇ ಬೆನ್ನ ಹಿಂದೆ ಇರಿಯುವ ರಾಜಕಾರಣಿಗಳ ಪರಿಚಯ ಮಾರ್ಮಿಕವಾದ ಮಾತುಗಳಲ್ಲಿ ವ್ಯಕ್ತವಾಗಿದೆ. ದಲಿತರ ಬಗ್ಗೆ ಅಡ್ಡಗೋಡೆಯ ಮೇಲೆ ದದೀಪವಿಟ್ಟಂತೆ ಮಾತನಾಡುವ ಮಂದಿ ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಾರೆ.
ಡಾ. ಶರಣಕುಮಾರ ಲಿಂಬಾಳೆ ಮರಾಠಿ ಸಾಹಿತ್ಯದಲ್ಲಿ ಅಗ್ರ ಪಂಕ್ತಿಯ ಹೆಸರು. ಇವರ ಆತ್ಮವತ್ತಾಮತ ಆಧರಿತ ಮರಾಠಿ ಕಾದಂಬರಿ ‘ಅಕ್ಕರಮಾಶಿ’ ಬಹುಚರ್ಚಿತ. ಇದು ‘ಅಕ್ರಮ ಸಂತಾನ’ ಶೀರ್ಷಿಕೆಯಲ್ಲಿ ಕನ್ನಡದಲ್ಲಿ ನವಕರ್ನಾಟಕದಿಂದ ಪ್ರಕಟವಾಗಿದ್ದು ಭಾರತದ ಹಲವಾರು ಭಾಷೆಗಳಲ್ಲದೆ ಇಂಗ್ಲಿಷ್ ಗೂ ಅನುವಾದಗೊಂಡಿದೆ ಇವರ ‘ಹಿಂದೂ’, ‘ನರವಾನರ’ ಮತ್ತು ‘ಬಹುಜನ’ ಕನ್ನಡಾನುವಾದಗಳನ್ನೂ ನವಕರ್ನಾಟಕ ಪ್ರಕಟಿಸಿದೆ.
ಕೃತಿಯ ಅನುವಾದಕಿ ಡಾ. ಪ್ರಮೀಳಾ ಮಾಧವ ಎಂ.ಎ, ಪಿ.ಎಚ್.ಡಿ ಪದವೀಧರೆ. ಪುತ್ತೂರಿನ ವಿವೇಕಾನಂದ ಕಾಲೇಜು, ಬೆಂಗಳೂರಿನ ಎ.ಪಿ.ಎಸ್. ಕಾಲೇಜುಗಳಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ನಿವೃತ್ತಿ. ಹಲವಾರು ಕೃತಿಗಳ ರಚನೆ ಮತ್ತು ಅನುವಾದ ಮಾಡಿದ್ದಾರೆ. ಉತ್ತಮ ಶಿಕ್ಷಕಿ ಪುರಸ್ಕಾರ, ಡಾ. ಎಚ್. ಎನ್. ದತ್ತಿ ಪ್ರಶಸ್ತಿ, ಸಾವಿತ್ರಿ ಬಾಯಿ ಫುಲೆ ರಾಷ್ಟ್ರೀಯ ಪ್ರಶಸ್ತಿ ಇವರಿಗೆ ಲಭಿಸಿದೆ. (ಬೆನ್ನುಡಿಯಿಂದ)
-----
©2024 Book Brahma Private Limited.