ಮರೀಚಿಕೆ : ಆರಿಫ್ ಲವ್ಸ್ ಸುಮಿತ್ರಾ ಕಾದಂಬರಿಯ ಮೂಲ ಲೇಖಕರು ಅಬ್ದುಲ್ಲಾಹ್ ಖಾನ್. ಇದನ್ನು ಕನ್ನಡಕ್ಕೆ ಅನುವಾದಕರಾದ ಅಬ್ದುಲ್ ರೆಹಮಾನ್ ಪಾಷ ಎಂ ತಂದಿದ್ದಾರೆ.
ಮಧ್ಯಮ ವರ್ಗದ ಶ್ರದ್ಧಾವಂತ ಮುಸ್ಲಿಮ್ ಕುಟುಂಬದ ಯುವಕ ಆರಿಫ್ ಇಟ್ಟುಕೊಳ್ಳುವ ಮಹಾತ್ವಾಕಾಂಕ್ಷೆಯ ಕನಸುಗಳು ಒಂದೊಂದಾಗಿ ಕಮರುತ್ತವೆ. 1980-90ರ ದಶಕದ ಬಿಹಾರಿನ ಅರಾಜಕ ಸಾಮಾಜಿಕ, ರಾಜಕೀಯ ಪ್ರಕ್ಷುಬ್ಧತೆಯಲ್ಲಿ ಆರಿಫ್ ನ ಬದುಕು ಹಾಯಿಹರಿದ ದೋಣಿಯಾಗುತ್ತದೆ. ಸಾಲದು ಎಂದು, ಆಕಸ್ಮಿಕವಾಗಿ ಚುಂಬಕ ಸೌಂದರ್ಯದ, ಅಪ್ಪಟ ಸ್ನೇಹ ಸ್ವಭಾವದ ತನಗಿಂತ ಹದಿನೈದು ವರ್ಷ ದೊಡ್ಡವಳಾದ ವಿವಾಹಿತ, ಹಿಂದು ಮಹಿಳೆ ಸುಮಿತ್ರಾಳ ಮೋಹಪಾಶದಲ್ಲಿ ಸಿಲುಕಿ, ತನ್ನ ಸಾಧನೆಗಳಲ್ಲಿ ಸೋಲುತ್ತಾ ಹೋಗುತ್ತಾನೆ. ಇದು ಒಬ್ಬ ವ್ಯಕ್ತಿಯಾಗಿ ಆರಿಫ್ ನ ಕಥೆಯೂ ಹೌದು, ವಿಶಿಷ್ಟವಾಗಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ನಂತರದ ಪ್ರಕ್ಷುಬ್ಧ ಭಾರತದಲ್ಲಿ ಒಬ್ಬ ಮುಸ್ಲಿಮ್ ಆಗಿ ನಿಭಾಯಿಸುವ ಯುವಕನ ಕಥೆಯೂ ಹೌದು. ಆ ಕಾರಣಕ್ಕೆ ಆರಿಫ್ ಈ ದೇಶದ ಯುವಜನರ ಪ್ರತೀಕವಾಗಿಬಿಡುತ್ತಾನೆ.
ಬೆಳಕಿಂಡಿಯಾಗದ ವ್ಯವಸ್ಥೆ ; ವ್ಯಾಖ್ಯೆ ಮೀರಿದ ಪ್ರೀತಿ
ಇನ್ನು 'ಮರೀಚಿಕೆ' ಹೆಸರಿನ 'ಆರಿಫ್ ಲವ್ ಸುಮಿತ್ರಾ' ಎಂಬ ಟ್ಯಾಗ್‌ಲೈನ್ ಹೊತ್ತ ಅಬ್ದುಲ್ಲಾಹ್ ಖಾನ್ ಅವರ ಪುಸ್ತಕವು ಹೆಸರಿನಲ್ಲೇ ಕಥೆಯ ಸಾರಾಂಶ ಹೇಳುತ್ತದಾದರೂ, ಓದುತ್ತಾ ಹೋದಂತೆ ಹಿಂದೂಮುಸ್ಲಿಮರ ನಡುವಿನ ಸಂಬಂಧ ಬಂದು ನಿಂತಿರುವ ಇಂದಿನ ಅನಪೇಕ್ಷಣೀಯ ಸಂದರ್ಭಕ್ಕೂ ಪ್ರಸ್ತುತವಾಗುತ್ತಾ ಹೋಗುತ್ತದೆ. ದೇಶದ ಮುಸಲ್ಮಾನರಲ್ಲಿ ನೆಲೆಗಟ್ಟಿರುವ ಅಭದ್ರತಾ ಭಾವನೆಯನ್ನು ಯುವಕ ಆರಿಫ್‌ನ ಮೂಲಕ ಸ್ಪಷ್ಟವಾಗಿ ದಾಖಲಿಸುತ್ತದೆ. ಆದರೂ, ಹಿಂದೂ ಮಹಿಳೆಯ ಪ್ರೇಮಪಾಶಕ್ಕೆ ಸಿಲುಕುವ ಆರಿಫ್‌ನ ಮಾನಸಿಕ ತೊಳಲಾಟವೇ ಎಲ್ಲಕ್ಕಿಂತ ಹೆಚ್ಚಾಗಿ ಓದುಗರನ್ನು ಆವರಿಸಿಕೊಳ್ಳುತ್ತದೆ. “ಪ್ರೀತಿಯ ಯಾತನೆಯ ಹೊರತಾಗಿಯೂ ಹಲವು ದುಃಖಗಳಿವೆ ಈ ಜಗತ್ತಿನಲ್ಲಿ..' ಎಂಬ ಉಕ್ತಿಯನ್ನು ಆರಂಭದಲ್ಲೇ ಉಲ್ಲೇಖಿಸುವ ಮೂಲಕ ಲೇಖಕರು, ಪೂರ್ವಗ್ರಹಗಳನ್ನು ಇಟ್ಟುಕೊಂಡೇ ಕಾದಂಬರಿಯನ್ನು ಬರೆಯಲಾರಂಭಿಸಿರುವುದು ಸ್ಪಷ್ಟವಾಗುತ್ತದೆ. ಈ ಕಾರಣಕ್ಕೇ, 'ಸುಂದರ' ಸಂಸಾರದ ಚೌಕಟ್ಟಿನೊಳಗಿದ್ದೂ ಆರಿಫ್‌ನ ಪ್ರೀತಿಗಾಗಿ ಹಂಬಲಿಸುವ ಸುಮಿತ್ರಾಳ ಮನದಿಂಗಿತ ಇಲ್ಲಿ ಮುಕ್ತವಾಗಿ ತೆರೆದುಕೊಳ್ಳುವುದೇ ಇಲ್ಲ. ಆದರೂ ಯಶಸ್ವಿ ದಾಂಪತ್ಯಕ್ಕೆ ಅತ್ಯವಶ್ಯವಾದ ಸಾಂಗತ್ಯ, ಆಪ್ತವಾದ ಅನುಭೂತಿಯ ಪಸೆ ಇಲ್ಲದಿದ್ದರೆ ಉಳಿದೆಲ್ಲ ಲೌಕಿಕ ಭೋಗಗಳೂ ನಿರರ್ಥಕ ಎಂಬುದನ್ನು ಸುಮಿತ್ರಾಳ ಪಾತ್ರ ಪರೋಕ್ಷವಾಗಿ ಬಿಂಬಿಸುತ್ತದೆ. ಎಲ್ಲ ಎಲ್ಲೆಗಳನ್ನೂ ಮೀರಿದ ನಿರ್ಮಲವಾದ ಪ್ರೀತಿಯ ಪ್ರತಿನಿಧಿಗಳಂತೆ ಆರಿಫ್ ಮತ್ತು ಸುಮಿತ್ರಾ ಭಾಸವಾಗುತ್ತಾರೆ. ಈ ಪುಸ್ತಕಗಳು ಓದುಗರಿಗೆ ಆಪ್ತವಾಗುವುದರ ಹಿಂದೆ, ಇವುಗಳನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿರುವ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ ಅವರ ಕೊಡುಗೆಯೂ ಇದೆ.
ನೀಲಾ ಎಂ. ಎಚ್
08 ಡಿಸೆಂಬರ್ 2019, ಕೃಪೆ : ಪ್ರಜಾವಾಣಿ
©2024 Book Brahma Private Limited.