ಸಮಕಾಲಿನ ಅಸ್ಸಾಮಿ ಸಾಹಿತ್ಯ ಲೋಕದಲ್ಲಿ ಹೊಮೆನ್ ಬೊರ್ಗೆಹೈನ್ ಹೆಸರು ಓದುಗರಿಗೆ ಹೆಚ್ಚು ಚಿರಪರಿಚಿತ. ಸಾಹಿತ್ಯದ ಎಲ್ಲ ಪ್ರಾಕಾರಗಳಲ್ಲಿ ಇವರು ಕೈ ಆಡಿಸಿದ್ದಾರೆ. ಅಸ್ಸಾಮಿ ಭಾಷೆಯಲ್ಲಿರುವ ಇವರ ‘ಅಸ್ಟೊರಾಗ್’ (ಸೂರ್ಯಾಸ್ತ) ಕಾದಂಬರಿಯನ್ನು ಅಶೋಕ್ ಭಗವತಿ ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಇಂಗ್ಲಿಷ್‌ನಿಂದ ಕನ್ನಡಕ್ಕೆ ಚಿನ್ನವ್ವ ಚಂದ್ರಶೇಖರ ವಸ್ತ್ರದ ಅವರು ಅಷ್ಟೇ ಅಚ್ಚುಕಟ್ಟಾಗಿ ಅನುವಾದಿಸಿದ್ದು, ಕನ್ನಡದ ಓದುಗರಿಗೂ ಈ ಕಾದಂಬರಿಯ ಸೊಗಡು ಆನಂದಿಸಲು ಅನುವು ಮಾಡಿಕೊಟ್ಟಿದ್ದಾರೆ. ಅಪರಾಧ ಮತ್ತು ಪಶ್ಚಾತ್ತಾಪವೇ ಈ ಕಾದಂಬರಿಯ ಕೇಂದ್ರವಸ್ತು. ಕೊಂಚ ವಿಕ್ಷಿಪ್ತ ಮನಸಿನ, ಮಧ್ಯಮ ವಯಸ್ಸಿನ ದಿಲೀಪ ಕಾದಂಬರಿಯ ನಾಯಕ. ಈತ ತನ್ನ ತಂದೆಯ ವೃದ್ಧಾಪ್ಯದ ಕ್ಷಣಗಳನ್ನು, ನೋವುಗಳನ್ನು, ದೇಹವು ಸಾವಿಗೆ ಮುನ್ನ ನಿಧಾನವಾಗಿ ಕಟ್ಟಿಗೆಯಂತೆ ಒಣಗುವುದನ್ನು, ವೃದ್ಧಾಪ್ಯದ ಕಾರಣವಾಗಿ ಮತಿಹೀನ ಸ್ಥಿತಿಯೆಡೆಗೆ ಆತ ಜಾರುವುದನ್ನು ನೋಡಿ ಭಯವಿಹ್ವಲಗೊಳ್ಳುತ್ತಾನೆ. ಈತ ಎಲ್ಲ ವೃದ್ಧರ ಮಕ್ಕಳ ಪ್ರತಿನಿಧಿಯಂತೆಯೂ ಭಾಸವಾಗುತ್ತಾನೆ.
©2024 Book Brahma Private Limited.