ಕೆಂಪು ಮುಡಿಯ ಹೆಣ್ಣು

Author : ಓ. ಎಲ್. ನಾಗಭೂಷಣಸ್ವಾಮಿ

Pages 264

₹ 250.00




Year of Publication: 2020
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು- 560040
Phone: 08023505825

Synopsys

’ ಒರ್ಹಾನ್ ಪಮುಕ್ ಅವರ ‘The Red Haired Women’ ಕೃತಿಯ ಕನ್ನಡಾನುವಾದ ‘ಕೆಂಪು ಮುಡಿಯ ಹೆಣ್ಣು. ಅನುವಾದಕರು ಲೇಖಕ ಓ.ಎಲ್. ನಾಗಭೂಷಣಸ್ವಾಮಿ. ಒರ್ಹಾನ್ ಪಮುಕ್ ಒಬ್ಬ ನಿಪುಣ ಕತೆಗಾರ ಆತನ ಕತೆಗಳಲ್ಲಿ ಕತಾ ನಿರೂಪಣಾ ಶೈಲಿಯಷ್ಟೇ ಕುತೂಹಲಕಾರಿಯಾದ ವಿಚಾರಗಳು ತುಂಬಿರುತ್ತವೆ. ತನ್ನ ಕತೆಗಳಲ್ಲಿ ಪೂರ್ವ ಮತ್ತು ಪಶ್ಚಿಮದ ಸಂಸ್ಕೃತಿಗಳ ತಿಕ್ಕಾಟ, ಮನುಷ್ಯ ಸಂಬಂಧಗಳ ಜಟಿಲತೆ. ಆಧುನಿಕತೆ ಜೊತೆಗೆ ಪರಂಪರೆಯ ಪ್ರಶ್ನೆಗಳಿರುತ್ತವೆ. ವಾಸ್ತವವಾದಿಯಾಗಿ ಕತೆ ನಿರೂಪಿಸುವಾಗಲೂ ಚರಿತ್ರೆ, ಪುರಾಣ, ರಾಜಕೀಯದ ಆಯಾಮಗಳೂ ಸೇರಿಕೊಳ್ಳುತ್ತವೆ. ನಿತ್ಯದ ಬದುಕಿನಲ್ಲಿ ಇದ್ದೂ ನಾವು ಗಮನಿಸದ ವಸ್ತುಗಳ ಅರ್ಥಪೂರ್ಣ ವರ್ಣನೆ ಇರುತ್ತದೆ. ಆತನ ಮಿಕ್ಕ ಕೃತಿಗಳಂತೆ `ಕೆಂಪು ಮುಡಿಯ ಹೆಣ್ಣು’ ಕಾದಂಬರಿಯಲ್ಲೂ ಇಸ್ತಾಂಬುಲ್ ನಗರದ ವಾಸ್ತವ ವರ್ಣನೆ ಇದೆ. ಆದರೆ ರಸ್ತೆ, ಚೌಕ, ಮೊಹಲ್ಲ ಇತ್ಯಾದಿಗಳೆಲ್ಲ ಕತೆ ಓದುವಾಗಲೇ ಸ್ಪಷ್ಟವಾಗುತ್ತದೆ. ಆ ನಗರವನ್ನು ಬಲ್ಲವರಿಗೆ ಕತೆಯ ಭಾವಕ್ಕೂ ಊರಿನ ವಾಸ್ತವಕ್ಕೂ ಇರುವ ಸಂಬಂಧ ಹೊಸಕೋನದಿಂದ ಕಾಣುತ್ತದೆ. ಆದರೆ ಅವೆಲ್ಲ ವಿವರಗಳನ್ನೂ ಅನುಬಂಧದಲ್ಲಿ ನೀಡಿದರೆ ಓದಿನ ಸುಖಕ್ಕೆ ಅಡ್ಡಿಯಾದೀತು ಎಂದು ನೀಡಿಲ್ಲ. ಪಮುಕ್‍ನ ವಿಷಯ ವ್ಯಾಪ್ತಿಯ ಸೂಚನೆ ಒಂದಿಷ್ಟು ಸಿಗಲೆಂದು ಈ ಕಾದಂಬರಿಯಲ್ಲಿ ಉಲ್ಲೇಖಗೊಂಡಿರುವ ಚಾರಿತ್ರಿಕ ವ್ಯಕ್ತಿ, ಸಂದರ್ಭ, ಸಾಹಿತ್ಯ ಕೃತಿ ಮತ್ತು ಕಲಾವಿದರನ್ನು ಕುರಿತ ಅತ್ಯಂತ ಕಿರಿದಾದ ಟಿಪ್ಪಣಿಯನ್ನು ಅನುಬಂಧದಲ್ಲಿ ನೀಡಲಾಗಿದೆ. ಹಾಗೆಯೇ ವಿವಿಧ ಸಂದರ್ಶನಗಳಲ್ಲಿ ಆತ ಕಾದಂಬರಿ ಕಲೆಯ ಬಗ್ಗೆ ಹೇಳಿರುವ ಮಾತುಗಳ ಸಾರಾಂಶವನ್ನು, ಈ ಕಾದಂಬರಿ ಕುರಿತ ಕೆಲವು ಕುತೂಹಲದ ಸಂಗತಿಗಳನ್ನು ಅನುಬಂಧದಲ್ಲಿ ಸೇರಿಸಲಾಗಿದೆ. ಸಾಹಿತ್ಯದಲ್ಲಿ ಗಂಭೀರ ಆಸಕ್ತಿ ಉಳ್ಳವರಿಗೆ ಇದು ನೆರವಾಗುತ್ತದೆ ಎನ್ನುತ್ತಾರೆ ಅನುವಾದಕ ಓ.ಎಲ್. ನಾಗಭೂಷಣಸ್ವಾಮಿ.

About the Author

ಓ. ಎಲ್. ನಾಗಭೂಷಣಸ್ವಾಮಿ
(22 September 1953)

ಓ ಎಲ್ ನಾಗಭೂಷಣ ಸ್ವಾಮಿ- ಹುಟ್ಟಿದ್ದು22 ಸೆಪ್ಟೆಂಬರ್ 1953,  ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಇಂಗ್ಲಿಷ್  (1873) , ಎಂ.ಎ. ಕನ್ನಡ(1975)ಪದವಿ, ಎಂಡಿಟಿಡಿಬಿ ಕಾಲೇಜು ಮೈಸೂರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ,  ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆನೇಕಲ್. ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಸೇವೆ (1992-1998).  ಜನವರಿ2005 ರಲ್ಲಿ ಉದ್ಯೋಗದಿಂದ ಸ್ವಯಂ ನಿವೃತ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ವಿಶ್ವವಿದ್ಯಾನಿಲಯ ಕೆ. ಕೆ. ಬಿರ್ಲಾ ಫೌಂಡೇಷನ್, ಜೆ. ಕೃಷ್ಣಮೂರ್ತಿ ಪೌಂಡೇಷನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಲವು ಮಹತ್ವದ ...

READ MORE

Conversation

Reviews

ʼಕೆಂಪು ಮುಡಿಯ ಹೆಣ್ಣುʼ ಕೃತಿಯ ಪುಸ್ತಕ ವಿಮರ್ಶೆ- ಹೊಸ ಮನುಷ್ಯ

ಇದು ನೊಬೆಲ್ ಪುರಸ್ಕೃತ ಲೇಖಕ ಟರ್ಕಿಯ ಕಾದಂಬರಿಕಾರ ಒರ್ಹಾನ್ ಪಮುಕ್‌ನ The Redhaired women ಎಂಬ ಕಾದಂಬರಿಯ (2016) ಕನ್ನಾಡುನುವಾದ.

Life is stranger than fiction (ಬದುಕು ಕಥನಕ್ಕಿಂತ ಹೆಚ್ಚು ಆಗುಂತಕಮಯವಾದದ್ದು) ಅನ್ನುವ ಮಾತಿದೆ. ಈ ಕಾದಂಬರಿಯ ಘಟನೆಗಳು ಕೂಡ 'ಬದುಕು' ಮುಂದೆ ಎಂದು ನೋಡಿದಾಗ ಕತೆಗಿಂತ ರೋಚಕ ಅನ್ನಿಸದೇ ಇರದು. ಮೇಲ್ನೋಟಕ್ಕೆ ನಂಬಲು ಸಾಧ್ಯವಿಲ್ಲ ಅಥವಾ ಅಸಾಧ್ಯ ಎನ್ನುವ ಸಂಗತಿಗಳನ್ನು ಕತೆಯ ಹಂದರದೊಳಕ್ಕೆ ತಂದು ಅದನ್ನು ಒಪ್ಪಿಸಿ, ಓದುಗನನ್ನ ಒಪ್ಪಿಸುವ ತಂತ್ರಹೊಸದೇನಲ್ಲ. ಆದರೆ, ಅದನ್ನು ಲೇಖಕ ಯಶಸ್ವಿಯಾಗಿ ಮಾಡಿದ್ದಾನೆ. ನಿಭಾಯಿಸುವುದು ಸಾಧ್ಯವಾಗಿದೆ. ಅನುವಾದ ಮಾಡಿರುವ ಓ.ಎಲ್. ನಾಗಭೂಷಣಸ್ವಾಮಿ ಅವರು ಕೂಡ ಕಾದಂಬರಿಯ ನಾಡಿ ಹಿಡಿಯುವಲ್ಲಿ ಯಶಸ್ವಿಯಾಗಿರುವುದರಿಂದ ಗೊಂದಲಕ್ಕೆ ಎಡೆಯಿಲ್ಲದಂತೆ ಓದಿಸಿಕೊಂಡು ಹೋಗುತ್ತದೆ. ಅಸಂಗತ ಸಂಗತಿಗಳು ಸೂತ್ರದ ಭಾಗ ಎನ್ನುವಂತೆ ಕಾಣಿಸಲಾಗಿದೆ. ಅಸಹಜ ಅನ್ನಿಸಿದರೂ ತರ್ಕದ ಬೆನ್ನೆಲುಬು ನೀಡಿರುವುದು ಸಹಜ ಅಂದುಕೊಳ್ಳಲು ಅನುವು ಮಾಡಿದೆ.

ಕಾದಂಬರಿಯ ಕ್ಯಾನ್ವಾಸ್‌ನ ಭಿತ್ತಿಯ ಹಿನ್ನೆಲೆಯಲ್ಲಿ ಪಶ್ಚಿಮದ ಗ್ರೀಕ ಈಡಿಪಸ್ ಹಾಗೂ ಪರ್ಶಿಯಾದ ಸೋಹ್ರಾಬ್ ರುಸ್ತುಂ ಕತೆಗಳಿವೆ. ಒಂದು ಪಿತೃಹತ್ಯೆಯ ಕತೆಯಾದರೆ, ಮತ್ತೊಂದು ಪುತ್ರಹತ್ಯೆಯ ಕತೆ. ಈ ಎರಡೂ ಕತೆಗಳು ಕಾದಂಬರಿಯುದ್ದಕ್ಕೂ ಮತ್ತೆ ಮತ್ತೆ ಬರುತ್ತವೆ. 'ಮುಗಿಸಿ'ಯೇ ಆರಂಭ ಆಗುವ ಹಂಬಲ-ಒತ್ತಡ ಎದುರಿಸುವ ಪಾತ್ರಗಳು. ಅದಕ್ಕೆ ಅನುಗುಣವಾದ ಕತೆ.

ಮೂರು ಭಾಗಗಳಲ್ಲಿ ಇರುವ ಕಾದಂಬರಿಯು ಕಟ್ಟಿಕೊಡುವ ಲೋಕ ಇತ್ತೀಚಿನದುಸಮಕಾಲೀನವಾದದ್ದು. ಕಳೆದ ಶತಮಾನದ ೮೦ ರ ದಶಕದ್ದು. ಇಸ್ತಾಂಬುಲ್ ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ನಡೆಯುವಂತಹದ್ದು. ವಸ್ತುವಿನ ಬೆಳವಣಿಗೆಯ ದೃಷ್ಟಿಯಿಂದ ಸ್ವಲ್ಪ ಹಿಂದೆ-ಮುಂದೆ ಸೇರಿಕೊಳ್ಳುತ್ತದೆ. ಆಧುನಿಕತೆ ಹಾಗೂ ಪರಂಪರೆಗಳನ್ನು ಮುಖಾಮುಖಿಯಾಗಿಸುವ ಈ ಕಾದಂಬರಿಯು ತೆರೆದಿಡುವ ವಿಸ್ತಾರ ಬೆರಗುಗೊಳಿಸುತ್ತದೆ. ಮೊದಲ ಎರಡು ಭಾಗಗಳು ಕತೆಯ ನಾಯಕನ ನಿರೂಪಣೆಯಲ್ಲಿದೆ. 'ಬಾವಿ ತೋಡುವ ಪ್ರಕ್ರಿಯೆಯಿಂದ ಆರಂಭವಾಗುವ ಕಾದಂಬರಿಯು ಬೆಳೆಯುತ್ತ ಪತ್ತೇದಾರಿ ಗುಣ ಪಡೆದುಕೊಳ್ಳುತ್ತದೆ. ಕುತೂಹಲದ ಮೊಟ್ಟೆ ಒಡೆಯದ ಹಾಗೆ ನೋಡಿಕೊಳ್ಳುತ್ತದೆ. ಪ್ರತಿ ವಿವರವೂ ಕತೆಯ ಬೆಳವಣಿಗೆಗೆ ಪೂರಕವಾಗಿ ಸಹಕರಿಸುವಂತೆ ಕತೆಯನ್ನು ಹೆಣೆಯಲಾಗಿದೆ. ಗತವನ್ನು ಹುಡುಕುವ ನಾಯಕನ ಆಸೆ-ಕನಸುಗಳು “ಮಗ'ನಲ್ಲಿ ಬೆಳೆಯುವುದುಉಳಿಯುವುದು ನಿನ್ನೆ-ನಾಳೆಗಳ ನಡುವಿನ ಇಂದನ್ನು ಚಿತ್ರಿಸುತ್ತದೆ.

ಮೂರನೆಯ ಭಾಗವನ್ನು ಕೆಂಪುಮುಡಿಯ ಹೆಣ್ಣು' ನಿರೂಪಿಸುತ್ತಾಳೆ. ಮೊದಲೆರಡು ಭಾಗದ ಕತೆಯನ್ನು ಮುಂದುವರೆಸುವುದರ ಜೊತೆಗೆ ವಿಭಿನ್ನ ಆಯಾಮ ಒದಗಿಸುತ್ತಾಳೆ. ಆಯ್ಕೆಯಿಂದ ಕೆಂಪು ಮುಡಿಯವಳಾದ ನಾಯಕಿ ಬದುಕು ಪುರಾಣಗಳು ಒಂದಾಗುವದನ್ನು ಕಂಡವಳು. ಅದನ್ನು ಒಂದಾಗಿಸಿದವಳು. ಈ ಕಾದಂಬರಿಯ ಕೇಂದ್ರ ಪಾತ್ರಗಳೆಂದರೆ ಬಾವಿ ಹಾಗೂ ಕೆಂಪು ಮುಡಿಯ ಹೆಣ್ಣು. ಇಡೀ ಕಾದಂಬರಿಯು ಈ ಎರಡರ ಸುತ್ತಲೇ ಗಿರಕಿ ಹೊಡೆಯುತ್ತದೆ. ಹಲವು ಓದುಗಳ ಸಾಧ್ಯತೆಯನ್ನು ತೆರೆದಿಡುತ್ತದೆ. ನಾಟಕೀಯ ಘಟನೆಗಳು ಅದನ್ನು ಒಂದಕ್ಕೊಂದು ತಳುಕು ಹಾಕುತ್ತ ಹೆಣೆಯುವ ಕ್ರಮ ಚೆನ್ನಾಗಿದೆ. ತಲೆಮಾರುಗಳ ನಡುವಿನ ಮುಖಾಮುಖಿಸಂಘರ್ಷಗಳು ಅರಿಯದೇ ನಡೆಯುವಂತಹವು ಮಾತ್ರವಲ್ಲ. ಅರಿವಿದ್ದರೂ ತಪ್ಪಿಸಲಾಗದಂತಹವು. ಪುರಾಣ-ಕಾವ್ಯ-ಚರಿತ್ರೆಗಳು ಒಂದರೊಳಗೊಂದು ಬೆರೆತು ತಮ್ಮ ಹದವಾದ ಮಿಶ್ರಣದಿಂದ ಕಾದಂಬರಿಯ ಓದನ್ನು ಸಹ್ಯವಾಗಿಸಿವೆ. ಪಾತ್ರಗಳ ಹೆಸರು ಮತ್ತು ಸ್ಥಳಗಳ ವಿವರಗಳನ್ನು ಹೊರತು ಪಡಿಸಿದರೆ ಇಡೀ ಕಾದಂಬರಿಯು ಕನ್ನಡದ್ದೇ ಅನ್ನಿಸುವ ಹಾಗಿದೆ. ಬಾವಿ ತೋಡುವ ವಿವರಗಳು ಹಾಗೂ ಅದರ ಪಾರಂಪರಿಕ ಜ್ಞಾನದ ವಿವರಗಳು 'ದೇಸಿ' ವಿಧಾನದ ಹಾಗಿವೆ. ಕಾದಂಬರಿಯ ಕೊನೆಯಲ್ಲಿ ಅನುಬಂಧದಲ್ಲಿ ನೀಡಲಾಗಿರುವ ವಿವರಗಳು ಕತೆಯಲ್ಲಿ ಬರುವ ಸಂಗತಿ-ವಿಷಯಪುಸ್ತಕಗಳ ಬಗ್ಗೆ ಅರಿಯಲು ಅನುವು ಮಾಡುತ್ತದೆ.

(ಕೃತಿ: ಪುಸ್ತಕಾವಲೋಕನ  ಬರಹ- ದೇವು ಪತ್ತಾರ)

Related Books