ಗಳಗನಾಥರು ಬರೆದ ಕೃತಿ-ಕ್ಷಾತ್ರತೇಜ ಅಥವಾ ಸ್ವಾಮಿಭಕ್ತಿ ಪ್ರದರ್ಶನ. 1914ರಲ್ಲಿ ಈ ಕೃತಿಯು ಮೊದಲ ಮುದ್ರಣ ಕಂಡಿತ್ತು. ಮಹಾರಾಷ್ಟ್ರದ ಮ.ರಾ.ರಾ. ಹರಿ ನಾರಾಯಣ ಆಪಟೆ ಅವರು ಬರೆದ ‘ರೂಪನಗರಚಿ ರಾಜಕನ್ಯೆ’ ಎಂಬ ಕಾದಂಬರಿಯನ್ನು ಆಧರಿಸಿ ಬರೆಯಲಾಗಿದೆ ಎಂದು ಲೇಖಕರು ಹೇಳಿದ್ದಾರೆ. ಮೊಗಲ್ ಸಾಮ್ರಾಜ್ಯದ ಔರಂಗಜೇಬ ಹಾಗೂ ರಜಪೂತರ ಮಧ್ಯೆ ನಡೆದ ಯುದ್ಧಗಳ ವರ್ಣನೆ ಇದೆ. ರಜಪೂತರ ಕ್ಷಾತ್ರತೇಜಸ್ಸು ವರ್ಣಿತವಾದ್ದರಿಂದ ಕೃತಿಗೆ ಕ್ಷಾತ್ರತೇಜಸ್ಸು ಎಂತಲೂ ಅಲ್ಲಲ್ಲಿ ಸ್ವಾಮಿಭಕ್ತಿ ವ್ಯಕ್ತವಾಗುತ್ತಿದ್ದರಿಂದ ಸ್ವಾಮಿಭಕ್ತಿ ಪ್ರದರ್ಶನ ಎಂತಲೂ ಕೃತಿಗೆ ಶೀರ್ಷಿಕೆ ನೀಡಿರುವುದಾಗಿಯೂ ಲೇಖಕರು ತಿಳೀಸಿದ್ದಾರೆ.
ರೂಪನಗರದ ವಿಜಯಸಿಂಹನ ಸ್ವಾಭಿಮಾನ, ಸ್ವಕುಲಾಭಿಮಾನ, ಉದೇಪುರದ ರಾಜಸಿಂಹನ ವಿಚಾರಪೂರ್ವಕ ಕಾರ್ಯಪ್ರವೃತ್ತಿ, ರೂಪಮತಿಯ ಕುಲೀನತೆ, ಇಂದಿರೆ-ಪದ್ಮೆ-ದುರ್ಗಾದಾಸ ಇವರ ಸ್ವಾಮಿನಿಷ್ಠೆ, ಔರಂಗಜೇಬನ ವಿಷಯಾಸಕ್ತಿ, ಉದೇಪುರಿಯ ಪತಿನಿಷ್ಠೆ, ಚಂದ್ರಾವತಿಯ ತೇಜಸ್ವಿತೆ ಎಲ್ಲವನ್ನೂ ಸುಂದರವಾಗಿ ವರ್ಣಿಸಲಾಗಿದೆ. ಈ ಕಾದಂಬರಿಯು ರಾಜಸಗುಣ ಪ್ರಧಾನವಾಗಿದೆ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...
READ MORE