ಚಿತ್ತಾಲರ ಮೂರನೆಯ ಕಾದಂಬರಿ ಛೇದ. 'ಶಿಕಾರಿ'ಯ ನಂತರ ಪ್ರಕಟವಾದ ’ಛೇದ’ದ ಕೇಂದ್ರದಲ್ಲಿ ಒಂದು ಭೀಕರ ಕೊಲೆ ನಡೆಯುತ್ತದೆ. ಇಡೀ ಕಾದಂಬರಿಯ ವಸ್ತು ಅದರ ಸುತ್ತ ಬಿಚ್ಚಿಕೊಳ್ಳುತ್ತದೆ. ಭೀಕರ ಕೊಲೆಗೆ ತುತ್ತಾದವನು ಯಾರು ಎಂಬ ರಹಸ್ಯ ಕಾದಂಬರಿಯ ಕೊನೆಯ ಹಂತದವರೆಗೆ ರಹಸ್ಯವಾಗಿಯೇ ಉಳಿಯುತ್ತದೆ. ರಹಸ್ಯವಾಗಿ ಉಳಿಯುವ ನೆಲೆಯಿಂದ ವಿಚಿತ್ರ ಸಂಬಂಧಗಳು ಹುಟ್ಟುತ್ತವೆ. ಆ ಕೊಲೆಯನ್ನು ಕಂಡ ವಾಸುದೇವನ್‌ನ ತಳಮಳ. ಅವನು ತನ್ನ ಕೊಲೆಯ ಹುಸಿ ಸಂಗತಿಯನ್ನು ತಾನೇ ಸೃಷ್ಟಿಸುತ್ತಾನೆ. ಅದನ್ನು ನಂಬಿ ಶೋಧನೆಗೆ ತೊಡಗುವ ಅವನ ತಮ್ಮ ಕರುಣಾಕರನ್. ಅವರಿಬ್ಬರ ಬೆನ್ನು ಹತ್ತುವ ಆಗಂತುಕರು. ಅವರ ಸೂಕ್ಷ್ಮತೆಗಾಗಿ ಪರಿತಪಿಸುವ ಬೆಹರಾಮ್ ಪೋಚಖಾನಾವಾಲಾ - ಅವನ ಕುಟುಂಬ ಇಂಥ ಘಟನಾವಳಿಗಳ ಕಥಾಭಿತ್ತಿಯಲ್ಲಿ ಇಡೀ ಕಾದಂಬರಿ ಚಿತ್ರಿತವಾಗಿದೆ.
ಕಾದಂಬರಿಯ ಮುಖ್ಯವಾದ ಒತ್ತು ಮನುಷ್ಯ ಸಂಬಂಧ, ಮನೋನೆಲೆಗಳ, ಅಂತರಂಗದಲ್ಲಿ ನೆಲಸಿದ ಭಯದ ಸ್ವರೂಪ,ನಾಗರಿಕತೆಯ ಹೆಸರಿನಲ್ಲಿ ತಾನೇ ತನಗಾಗಿ ಸೃಷ್ಟಿಸಿಕೊಂಡ ಕ್ರೂರ ವ್ಯವಸ್ಥೆಯ ಸ್ವರೂಪದ ಶೋಧನೆ ಬಗ್ಗೆ ಇದೆ.
ಕಾದಂಬರಿಯನ್ನು ಕುರಿತು ವಿಮರ್ಶಕ ಎಸ್.ಎಸ್. ರೇಣುಕಾರಾಧ್ಯ ’ಪಾತ್ರಗಳ ಪರಸ್ಪರ ಮುಖಾಮುಖಿಯಲ್ಲಿ ಅನ್ನಿಸಿದ್ದನ್ನು ನಿರ್ಮಮತೆಯಿಂದ ಹೇಳಲಾಗದ; ಅನ್ನಿಸಿದ್ದನ್ನು ಮಾತಾಗಿ ರೂಪುಗೊಳ್ಳದ; ಅನ್ನಬೇಕೆಂದುಕೊಂಡದ್ದೇ ಒಂದಾಗಿ ಮಾತಾಗಿ ಹೊರಬಂದದ್ದೇ ಮತ್ತೊಂದಾಗುವ ಸ್ಥಿತಿಯ ವಿವರಗಳು ಕಾದಂಬರಿಯ ಉದ್ದಕ್ಕೂ ಕಾಣಿಸಿಕೊಳ್ಳುತ್ತವೆ. ಇಂಥ ವಿವರಗಳು ಮನೋಲೋಕದ ಸೂಕ್ಷ್ಮಗಳ ಸ್ವರೂಪವನ್ನು ಬಿಚ್ಚಿಡುವಂತೆಯೇ ಕಾದಂಬರಿಯಲ್ಲಿ ಚಿತ್ರಿತವಾದ ಬದುಕಿನ ವಿಕೃತ ಸ್ವರೂಪವನ್ನೂ ಅದರಲ್ಲಿ ಮನುಷ್ಯ ಸಂಬಂಧರಾಹಿತ್ಯದ ಬಿಕ್ಕಟ್ಟಿನ ಸ್ಥಿತಿಯಲ್ಲಿ ಒಂಟಿತನದಲ್ಲಿ ಬದುಕಬೇಕಾಗಿ ಬಂದಿರುವ ಅನಿವಾರ್ಯವಾದ ಅಸಹನೀಯ ಸ್ಥಿತಿಯನ್ನೂ ಹೇಳುತ್ತವೆ. ಕಾದಂಬರಿಯ ಶೀರ್ಷಿಕೆಯ ಅರ್ಥ ಮನುಷ್ಯ ಸಂಬಂಧಗಳ ನಡುವೆ ಎದ್ದುನಿಂತ ಗೋಡೆಗಳು ಎಂಬರ್ಥದಲ್ಲೂ ಹೊಳೆಯುತ್ತದೆ. ಇಂಥ ಗೋಡೆಗಳನ್ನು ದಾಟುವ ಆಶಯಗಳು ಬೆಹರಾಮನ ಪಾತ್ರದಲ್ಲಿ ವಿಶೇಷವಾಗಿ ಪ್ರಕಟವಾಗುತ್ತವೆ’ ಎಂದು ವಿವರಿಸಿದ್ದಾರೆ.
©2024 Book Brahma Private Limited.