ಸ್ನೇಹ ಒಂದು ಮಧುರವಾದ ಅನುಬಂಧ. ಅದಕ್ಕೆ ಜಾತಿ, ಮತ, ಧರ್ಮ, ಲಿಂಗ, ಅಂತಸ್ತುಗಳ ಯಾವುದೇ ಹಂಗಿಲ್ಲ.ಕಟ್ಟುಪಾಡುಗಳಿಲ್ಲದ ಒಂದು ಸುಮಧುರ ಬಂಧ.ಸ್ವಾರ್ಥದ ಲೇಪನವಿಲ್ಲದ ಸಂಬಂಧವೆಂದರೆ ಇದೊಂದೆ.ಕೆಲವು ಸ್ನೇಹ ಸಂಬಂಧಗಳು, ವರ್ಷಗಳು ಕಳೆದರೂ ಮಾಸದೇ,ಇನ್ನಷ್ಟೂ ಮಗದಷ್ಟೂ ಬಿಗಿಯಾಗುತ್ತಾ ಹೋಗುತ್ತದೆ.ಇಂತಹದೇ ಸುಂದರ ಕಾದಂಬರಿ "ಸ್ನೇಹ ಮಾಧುರಿ" ಯ ಶ್ಯಾಮ್ ಮತ್ತು ಜಯಸಿಂಹರದ್ದು. ಅದಕ್ಕೆ ನೀರೆರೆದು ಪೋಷಿಸುವಂತಹ ಸುಂದರ ಮನಸ್ಸು,ಶ್ಯಾಮ್‌ನ ಮಡದಿ ಹಳ್ಳಿಯ ಮುಗ್ಧೆ, ಸದ್ಗುಣಿ.ಇದಕ್ಕೆ ತದ್ವಿರುದ್ಧ ಗುಣದವಳೇ ಜಯಸಿಂಹನ ಪತ್ನಿ ಲತಾ.ಈಕೆಯ ಸ್ವಾರ್ಥದ ಮಿತಿ ಎಷ್ಟೆಂದರೆ, ಗಂಡನ ಪ್ರೀತಿಯನ್ನು ಅತ್ತೆ ಮಾವನೊಂದಿಗೂ ಹಂಚಿಕೊಳ್ಳಲು ಈಕೆ ಒಪ್ಪುತ್ತಿರಲಿಲ್ಲ.ಗಂಡನ ಒಲವು, ಲಕ್ಷ, ಎಲ್ಲವೂ ತನ್ನೊಬ್ಬಳ ಸೊತ್ತು ಎಂಬಂತಹ ದುಷ್ಟ ಮನೋಭಾವ.ಮನಸ್ಸಿನ ಭಾವನೆಗಳನ್ನು ತೋರ್ಪಡಿಸುವ ಮೊದಲು ಹತ್ತು ಹಲವಾರು ಸಲ ಯೋಚಿಸಬೇಕು.ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸತ್ಯಾಸತ್ಯತೆಗಳನ್ನು ಪರಾಮರ್ಶಿಸಬೇಕು,ಇಲ್ಲದಿದ್ದರೆ ಆಗುವ ಅನಾಹುತಕ್ಕೆ ದಾರಿ ಮಾಡಿಕೊಟ್ಟಂತೆ ಎಂಬುವುದಕ್ಕೆ ಈ ಕಾದಂಬರಿಯೂ ಉತ್ರರವನ್ನು ನೀಡುತ್ತದೆ.ಅಂತಹದೇ ವಿಚಲಿತ ಮನಸ್ಸಿನ ವ್ಯಕ್ತಿ, ಈ ಕಥಾನಾಯಕ ಶ್ಯಾಮ್.ಹೆಂಡತಿ ಮತ್ತು ಸ್ನೇಹಿತನ ಸಂಬಂಧಕ್ಕೆ ಕೆಸರೆರಚುವಂತಹ ಪತ್ರ ಮತ್ತು ಕರೆಗಳು ಬಂದಾಗ, ಯಾರ ಬಳಿಯೂ ಚರ್ಚಿಸದೇ, ಪರಾಮರ್ಶಿಸದೇ, ಕಾರಣ ಹೇಳದೇ ಗರ್ಭಿಣಿ ಪತ್ನಿಯನ್ನು ತವರಿಗೆ ಅಟ್ಟಿ ಬಂದಂತಹ ಭೂಪ.ಅದೇ ನೋವಿನಲ್ಲಿ ಪತ್ನಿಗೆ ಏಕೈಕ ಆಧಾರವಾಗಿದ್ದ ಮಾವನವರ ಸಾವಿಗೂ ಕಾರಣನಾಗುತ್ತಾನೆ.ಪತ್ನಿ ರಮ್ಯಳ ಆರೋಗ್ಯ ಹದಗೆಡಲು ಕಾರಣನಾಗುತ್ತಾನೆ.ಕಛೇರಿ ಕೆಲಸದ ಮೇಲೆ ವಿದೇಶಕ್ಕೆ ಹೋದ ಜಯಸಿಂಹ ಹಿಂತಿರುಗಿ ಬಂದಾಗ, ತನ್ನ ಸ್ನೇಹಿತನ ಬದಲಾದ ಬಗೆ, ಜಯಸಿಂಹ ಈ ಕಾರ್ಯದಲ್ಲಿ ಯಶಸ್ವಿಯಾದನೆ? ಶ್ಯಾಮ್ ಮನಸ್ಸು ಪರಿವರ್ತನೆಯಾಯಿತೆ? ರಮ್ಯಳ ಆರೋಗ್ಯ ಸುಧಾರಿಸಿತೆ?ಶ್ಯಾಮ್ ಮತ್ತು ರಮ್ಯಳ ದಾಂಪತ್ಯ ಜೀವನ ಸರಿ ಹೋಯಿತೆ? ಇದಕ್ಕೆ ಕಾರಣವಾದ ಅನಾಮಧೇಯ ಪತ್ರ ಬರೆದವರ ಪತ್ತೆಯಾಯಿತೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕಾದಂಬರಿಯಲ್ಲಿದೆ.
©2024 Book Brahma Private Limited.