ತಂದೆಯ ಜೊತೆ ಎಸ್ಟೇಟ್ ನೋಡಿಕೊಂಡು ಜೀವನ ಸಾಗಿಸಲಿಚ್ಛಿಸದ ಅಭಿಲಾಷ್,ಮರಳಿ ಮನೆಗೆ ಬಂದಾಗ ಅನುಭವಿಸಿದ್ದು ಏಕಾಂಗಿತನ.ಇಷ್ಟವಿಲ್ಲದಿಲ್ಲದ ಕೆಲಸ ಮಾಡೋದು ಕಷ್ಟವೇ,ಆದರೂ ತಂದೆ ಒಬ್ಬರೇ ಹೇಗೆ ನಿಭಾಯಿಸುತ್ತಿದ್ದಾರೆ ಅಂತಾನೆ ಯೋಚಿಸಿರಲಿಲ್ಲ.ಈ ಕಥೆಯ ನಾಯಕಿ ರಂಜಿತಾ,ದಿಟ್ಟಸ್ವಭಾವದವಳು.ಪಟ ಪಟ ಮಾತನಾಡುವ ರಂಜಿತಾಳಿಗೆ ಟ್ರೈನ್ ಅಲ್ಲಿ ಅಭಿಲಾಷ್ನ ಪರಿಚಯವಾಗುತ್ತೆ.ಓದು,ಅವಳ ಅಜ್ಜಿ, ಇಂಟರ್ವ್ಯೂ ಕಥೆಗಳನ್ನೆಲ್ಲ ಹೇಳುವ ರಂಜಿತಾ ಓದುಗರಿಗೆ ಮೊದಲ ಹಂತದಲ್ಲೇ ಇಷ್ಟವಾಗುತ್ತಾಳೆ.ಪ್ರಿಯದರ್ಶಿನಿ ಬಗ್ಗೆ ಅಭಿಲಾಷ್ ಗಿಂತ ರಂಜಿತಾಳಿಗೆ ಹೆಚ್ಚು ತಿಳಿದಿತ್ತು.ಮುಂದೆ ಅದೇ ಎಸ್ಟೇಟ್ ಅಲ್ಲಿ ಅಭಿಲಾಷ್ನ ಪಿ.ಎ ಯಾಗುವ ರಂಜಿತಾ,ತನ್ನೆಲ್ಲ ಧೈರ್ಯ ಒಗ್ಗೂಡಿಸಿ,ಬುದ್ಧಿವಂತಿಕೆಯನ್ನು ಖರ್ಚು ಮಾಡುವ ರೀತಿ ನಿಜಕ್ಕೂ ಶ್ಲಾಘನೀಯ.ಅಭಿಲಾಷ್ ತಂದೆಯ ಮರಣಕ್ಕೆ ಕಾರಣ ಹುಡುಕ ಹೊರಟ ಅವಳಿಗೆ ಹಲವಾರು ಸಂಕಷ್ಟಗಳೆದುರಾದರೂ ಹಿಂದೆಸರಿಯಲಿಲ್ಲ.ಇನ್ನೊಬ್ಬರ ಸಹವಾಸ ನಮಗ್ಯಾಕೆ ಅನ್ನೋ ಜಾಯಮಾನದವರೇ ಹೆಚ್ಚಿರುವಾಗ,ಅಂತಹವರ ಮಧ್ಯೆ ರಂಜಿತಾ ಪಾತ್ರ ಅಪರೂಪವೇ.ಜೊತೆಗಿದ್ದೇ ಬೆನ್ನ ಹಿಂದೆ ಚೂರಿ ಹಾಕಿದವರು ಯಾರು? ಸಹಾಯ ಮಾಡಿದರೆಂದು ಪ್ರಿಯದರ್ಶಿನಿಯ ಒಡೆಯನನ್ನು ಜೀವನ ಪೂರ್ತಿ ಸ್ಮರಿಸುವ ರಂಜಿತಾ, ಅವರ ಮರಣಕ್ಕೆ ಕಾರಣರಾದವರನ್ನು ಹುಡುಕಿಯಾಳೇ? ಎಲ್ಲವಕ್ಕೂ ಉತ್ತರ ಈ ಕಾದಂಬರಿಯಲ್ಲಿದೆ.
©2024 Book Brahma Private Limited.