`ಮಹಲಿನೊಳಗೆ' ಮೂಲದಲ್ಲಿ ರಮಾ ಮೇಹ್ತಾ ಅವರ ಇಂಗ್ಲಿಷ್ ಕಾದಂಬರಿಯನ್ನು ಲೇಖಕ ವಸಂತಕುಮಾರ ಪೆರ್ಲ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಇಂಗ್ಲಿಷ್ ಕಾದಂಬರಿಯು ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದೆ. ಕೃತಿಯ ಕುರಿತು ಕೆ. ಶೈಲಾ ಕುಮಾರಿ, ‘ಆಧುನಿಕ ಮನೋಭಾವದ, ಮುಂಬೈಯ ಸುಶಿಕ್ಷಿತ ಹೆಣ್ಣುಮಗಳೊಬ್ಬಳು ರಾಜಸ್ತಾನದ ರಾಜ ಮನೆತನದ ಯುವರಾಜನಿಗೆ ಮದುವೆಯಾಗಿ, ಅರಮನೆಯೊಳಗೆ ಮುಖಪರದೆ ಹಾಕಿಕೊಂಡು ಸಂಪ್ರದಾಯಬದ್ಧ ರೀತಿಯಲ್ಲಿ ಹಲವು ಕಟ್ಟುಪಾಡುಗಳ ನಡುವೆ ಜೀವನ ಮಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ರಾಜವೈಭೋಗವಿದ್ದರೂ ತನಗೆ ಬೇಕಾದಂತೆ ಜೀವಿಸುವ ಸ್ವಾತಂತ್ರ್ಯವಿಲ್ಲ. ಆದರೂ, ನಿಧಾನವಾಗಿ ತನ್ನ ಮಿತಿಯಲ್ಲಿ ಅರಮನೆ ಮತ್ತು ಸುತ್ತುಮುತ್ತಲ ಪರಿಸರದಲ್ಲಿ ಶಿಕ್ಷಣಕ್ರಾಂತಿಯ ಮೂಲಕ ಆಕೆ ತರುವ ಬದಲಾವಣೆ ಮತ್ತು ನೂತನತೆಯ ಹವೆ ಕಾದಂಬರಿಯ ವಸ್ತು. ಪರಿಸರ ಅನುಕೂಲಕರವಾಗಿಲ್ಲದಿದ್ದರೂ ತಾಳ್ಮೆಯಿಂದ ಸಮಾಜದಲ್ಲಿ ಹೇಗೆ ಬದಲಾವಣೆ ತರಬಹುದು ಎಂಬುದಕ್ಕೆ ಈ ಕಥಾವಸ್ತು ಒಂದು ದೃಷ್ಟಾಂತದಂತಿದೆ. ಸ್ವಾತಂತ್ರ್ಯಾ ನಂತರದ ಬದಲಾವಣೆಗಳ ಒಂದು ಪ್ರಾತಿನಿಧಿಕ ಚಿತ್ರಣವಾಗಿಯೂ ಪ್ರಾಧಾನ್ಯತೆ ಪಡೆದುಕೊಳ್ಳುತ್ತದೆ. ರಾಜಸ್ತಾನದ ರಾಜ ಮನೆತನಗಳ ದಿವ್ಯವೂ ಭವ್ಯವೂ ಆದ ಮಹಲಿನೊಳಗಿನ ಪಾರಂಪರಿಕ ಜೀವನ, ದೈನಂದಿನ ಬದುಕಿನ ಒಳವಿವರಗಳು, ಸ್ವಾತಂತ್ರ್ಯಾನಂತರ ಬೀಸತೊಡಗಿದ ಹೊಸತನದ ಗಾಳಿ, ಜನರಿಗೆ ಶಿಕ್ಷಣದ ಕಡೆಗೆ ಇದ್ದ ಪ್ರೀತಿ ಕಾಳಜಿ ಹಸಿವು; ಅರಮನೆಗಳು ತಮ್ಮ ಸುತ್ತ ಕಟ್ಟಿಕೊಂಡಿರುವ ನಿಗೂಢತೆಗಳನ್ನು ಕಳಚಿಕೊಳ್ಳುತ್ತ ಪ್ರಜಾಪ್ರಭುತ್ವ ಸ್ಥಾಪನೆಗೊಳ್ಳುವ ಪ್ರಕ್ರಿಯೆ, ಸ್ತ್ರೀ ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆ ಇತ್ಯಾದಿ ಸಿದ್ಧಾಂತಗಳು ಅನಾವರಣಗೊಳ್ಳುವ ಬಗೆ - ಮೊದಲಾದವು ಕಾದಂಬರಿಯಲ್ಲಿ ಸಹಜವಾಗಿ ಅದ್ಭುತವಾಗಿ ಚಿತ್ರಿತವಾಗಿದೆ. ಇದು ಅನನ್ಯ ಕಾದಂಬರಿಯಾಗಿದ್ದು ಶೈಲಿ ಚೇತೋಹಾರಿಯಾಗಿದೆ. 1979 ರಲ್ಲಿ ಈ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂತು. ಕವಿ-ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು ಇದೊಂದು ಅನುವಾದ ಎಂಬುದು ಗೊತ್ತಾಗದ ರೀತಿಯಲ್ಲಿ ಆಪ್ತವಾಗಿ, ಸಹಜ ಸುಂದರ ಕನ್ನಡದಲ್ಲಿ ಅನುವಾದ ಮಾಡಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.