ಸ್ವೇಚ್ಛೆ ಕಾದಂಬರಿಯಲ್ಲಿ ’ಅರುಣ’ ಮಧ್ಯಮ ವರ್ಗದ ಆಧುನಿಕ ಸ್ತ್ರೀ. ಈ ವರ್ಗದ ಸ್ತ್ರೀಯರು ವಿದ್ಯಾವಂತರಾಗಿ ವಿವಿಧ ಉದ್ಯೋಗಗಳನ್ನು ನಿರ್ವಹಿಸಿ ಆರ್ಥಿಕವಾಗಿ ಇನ್ನೊಬ್ಬರನ್ನು ಅವಲಂಬಿತರಾಗದೆ ಸ್ವತಂತ್ರರಾಗುತ್ತಿದ್ದಾರೆ. ಸ್ವತಂತ್ರವಾಗಿ ಯೋಚಿಸುವ ಬುದ್ಧಿ, ಅದರಿಂದ ಬೆಳೆದ ಆತ್ಮಗೌರವ, ಇವೆಲ್ಲವೂ ಅವರ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಕುಟುಂಬದ ಬಗ್ಗೆ, ಸಂಪ್ರದಾಯ ಭಾವಗಳಿಗೆ ತಲೆಬಾಗಿಸದ ಹೊಸ ಯೋಚನೆಗಳು ಪ್ರಾರಂಭವಾಗಿ, ಸಾಂಸ್ಕೃತಿಕವಾಗಿ ಸ್ತ್ರೀಯರ ಮೇಲೆ ಪುರುಷ ಪ್ರಧಾನ ವ್ಯವ್ಯಸ್ಥೆಯು ಬಲವಂತವಾಗಿ ಹೇರಲ್ಪಟ್ಟ ವಿಚಾರಗಳನ್ನು ಪ್ರಶ್ನಿಸಲು ಆರಂಭಿಸುತ್ತಾರೆ. ಪುರುಷ ಪ್ರಧಾನ ವ್ಯವಸ್ಥೆಯನ್ನು ವಿರೋಧಿಸಲು ಆರಂಭಿಸಿದಾಗ ಕೆಲವು ಘರ್ಷನೆಗಳು ಉಂಟಾಗಿ ಸ್ತೀಯರ ಸ್ವಾಭಿಮಾನವನ್ನು ಹತ್ತಿಕ್ಕುವ ಕೆಲಸ ನಡೆಯುತ್ತದೆ. ತಮ್ಮನ್ನು ತಾವು ಪೋಷಿಸಿಕೊಂಡು, ರಕ್ಷಿಸಿಕೊಳ್ಳಬಲ್ಲವೆಂಬ ಸ್ತ್ರೀಯರ ದೃಷ್ಟಿಕೋನ ಬೆಳೆದಾಗ ಅವರು ಎದುರಿಸಬೇಕಾದ ಸಮಸ್ಯೆ, ಎದರಿಸಬೇಕಾದ ಸವಾಲುಗಳ ಕುರಿತು ಈ ಕಾದಂಬರಿಯಲ್ಲಿ ವಿವರಿಸಲಾಗಿದೆ.