ನೆಮ್ಮದಿಯ ದಾಂಪತ್ಯಕ್ಕೆ ಬೇಕಾಗಿರುವುದು ಐಷಾರಾಮಿ ಜೀವನದ ಶ್ರೀಮಂತಿಕೆಯಲ್ಲ, ಗಂಡ ಹೆಂಡತಿ ನಡುವೆ ನಂಬಿಕೆ,ಪ್ರೀತಿ,ವಿಶ್ವಾಸ,ಸಾಮರಸ್ಯ ಎನ್ನುವುದು ಈ ಕಾದಂಬರಿಯ ತಿರುಳು. ಕತೆಯ ನಾಯಕ ಸತೀಶ್, ಕಡು ಬಡತನ ಕುಟುಂಬದ ಹಿನ್ನೆಲೆ ಇರುವವನು.ತನ್ನ ತಂದೆ ಜಮೀನು ಮಾರಿ, ಸಾಲ ಮಾಡಿ ಚೆನ್ನಾಗಿ ಓದಿಸಿದ್ದರೂ ಕೆಲಸ ಸಿಗವುದಿಲ್ಲ.ಅಪ್ಪ,ಅಮ್ಮ,ತಂಗಿಯರು ಮನೆಯಲ್ಲಿ ಹೊಟ್ಟೆ ತುಂಬ ತಿನ್ನಲು ಗತಿಯಿಲ್ಲದೆ ಒದ್ದಾಡುವುದನ್ನು ಕಂಡು ನೋವನ್ನು ಅನುಭವಿಸುತ್ತಿರುತ್ತಾನೆ.ರಘುಪತಿ ಶೋಭಾ ಗ್ಲಾಸ್ ಫ್ಯಾಕ್ಟರಿ ಮಾಲಿಕ . ಆದರೆ ಅದರ ನಿಜವಾದ ಮಾಲಿಕ,ರಘುಪತಿ ತಂಗಿಯ ಮಗ ಅನಿಲ್.ಅನಿಲ್ ವಿದೇಶದಲ್ಲಿ ಎರಡು ವರ್ಷ ವ್ಯಾಸಂಗಕ್ಕೆ ಹೋಗಿರುವ ಕಾರಣ ರಘುಪತಿಯೇ ಈಗ ಆ ಫ್ಯಾಕ್ಟರಿಯ ಉಸ್ತುವಾರಿ ಮಾಲಿಕ.ತನ್ನ ಮಗಳಾದ ಶೋಭಾಳನ್ನು ಅನಿಲ್ ಗೆ ಮದುವೆ ಮಾಡಿಕೊಟ್ಟು ಫ್ಯಾಕ್ಟರಿ ಹಾಗು ಶ್ರೀಮಂತಿಕೆ ತಮ್ಮ ಮಗಳಿಗೆ ಸೇರುವಂತಾಗಲಿ ಎನ್ನುವುದು ಈತನ ದೂರಾಲೋಚನೆ.ಇದಕ್ಕೆ ಅನಿಲ್ ಹಾಗು ಶೋಭಾಳ ಸಮ್ಮತಿಯೂ ಇರುತ್ತದೆ.ಆದರೆ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆಯುತ್ತಿರುವ ಶೋಭಾಗೆ ಸದಾ ಸುಖ ಭೋಗ ಅನುಭವಿಸುವ ಆಸೆ. ಸಿರಿತನದ ಅಹಂ ಹಾಗೂ ಲೈಂಗಿಕ ಕಾಮನೆಗಳು ಜಾಸ್ತಿ.ತನ್ನ ಬಯಕೆಗಳನ್ನು ಈಡೇರಿಸಿಕೊಳ್ಳಲು ಯಾವುದೇ ಪುರುಷರ ಸಂಗ ಮಾಡಲು ಹಿಂದೆ ಮುಂದೆ ಯೋಚಿಸದವಳು. ಅನಿಲ್ ಬಂದು ಮದುವೆಯಾಗುವವರೆಗೆ ಬೇರೆ ಪುರುಷರ ಸಂಗ ಮಾಡಿ ಮರ್ಯಾದೆ ಹಾಳಾಗದಂತೆ,ಮಗಳ ಕಾಮನೆ ತಣಿಸಲು ಯಾವುದೇ ತಂದೆ ಮಾಡದ ಕೆಲಸವನ್ನು ರಘುಪತಿ ಮಾಡುತ್ತಾರೆ.ಉದ್ಯೋಗಕ್ಕಾಗಿ ಶೋಭಾ ಗ್ಲಾಸ್ ಫ್ಯಾಕ್ಟರಿಗೆ ಇಂಟರ್ ವ್ಯೂಗೆ ಬರುವ ಸತೀಶ್ ಗೆ ರಘುಪತಿ ಒಂದು ಆಫರ್ ಇಡುತ್ತಾರೆ.ಕಂಪನಿಯ ಮ್ಯಾನೇಜರ್ ಹುದ್ದೆ ಕೊಡುತ್ತೇನೆ,ವಾಸಕ್ಕೆ ದೊಡ್ಡ ಬಂಗಲೆ, ಕೈ ತುಂಬಾ ಹಣ ಸಿಗುತ್ತದೆ, ಆದರೆ ತನ್ನ ಮಗಳಾದ ಶೋಭಳಿಗೆ ಎರಡು ವರ್ಷ ಹೊರಪ್ರಪಂಚಕ್ಕೆ ಗೊತ್ತಾಗದಂತೆ ರಹಸ್ಯ ಗಂಡನಾಗಿ ಇದ್ದು ಅವಳ ದೈಹಿಕ ಬಯಕೆಗಳನ್ನು ಈಡೇರಿಸಬೇಕು.ಬಡತನದಲ್ಲಿ ಸಿಕ್ಕಿ ನರಳುತ್ತಿರುವ ಸತೀಶ್,ತನ್ನ ಮನೆಯವರ ಸುಖಕ್ಕಾಗಿ ಅನಿವಾರ್ಯವಾಗಿ ಒಪ್ಪಿಕೊಳ್ಳುತ್ತಾನೆ.ಶೋಭಾಳ ಲೈಂಗಿಕ ಆಸೆಗಳನ್ನು ಈಡೇರಿಸುವ ಗುಲಾಮನಂತಾಗುತ್ತಾನೆ.ಶೋಭಾಳ ಮೇಲೆ ಪ್ರೀತಿ ಮಾತ್ರ ಉಂಟಾಗುವುದಿಲ್ಲ.ಆದರೆ ಇದರಿಂದ ತನ್ನ ತಂಗಿಯರಿಗೆ ವೈಭವದ ಮದುವೆಗಳನ್ನು ಮಾಡುತ್ತಾನೆ.ಅಪ್ಪ ಅಮ್ಮ ತಂಗಿಯರಿಗೆ ದುಡ್ಡಿನ ಕೊರತೆ ಉಂಟಾಗದಂತೆ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಐಷಾರಾಮಿ ಜೀವನವನ್ನು ನಡೆಸುವ ಅವನಿಗೆ ಮಾನಸಿಕ ನೆಮ್ಮದಿ ಮಾತ್ರ ಇರುವುದಿಲ್ಲ. ಹೊರ ಜಗತ್ತಿಗೆ ಅನುಮಾನ ಬಾರದಿರಲಿ ಎಂದು ರಘುಪತಿ ಸತೀಶನಿಗೆ ಅನುಪಮ ಎನ್ನುವ ಸುಂದರ ಹುಡುಗಿಯ ಜೊತೆ ಮದುವೆಯನ್ನು ಮಾಡಿಸುತ್ತಾನೆ.ಸತೀಶ್ ಗೆ ಈಗ ಸಂದಿಗ್ಧತೆ.ಒಂದು ಕಡೆ ತನ್ನನ್ನು ಸುಖ ಕೊಡುವ ಯಂತ್ರದಂತೆ ಬಳಸುತ್ತಿರುವ,ದುಡ್ಡಿನ ಮದದ, ಕೋಮಲ ಭಾವನೆಗಳೇ ಇಲ್ಲದ,ಅಸಹ್ಯ ತರಿಸುವ ಶೋಭಾ.ಕೆಲಸ ಮತ್ತು ಶ್ರೀಮಂತಿಕೆ ಜೀವನಕ್ಕಾಗಿ ಸಹಿಸಲೇಬೇಕಾದ ಬಲವಂತದ ಸಂಗಾತಿ.ಇನ್ನೊಂದು ಕಡೆ ಸರಳತೆ, ಅದ್ಭುತ ಸೌಂದರ್ಯ,ಹೆಣ್ಣಿಗಿರಬೇಕಾದ ಗಾಂಭೀರ್ಯತೆ, ಬುದ್ಧಿವಂತಿಕೆ,ಆತ್ಮಾಭಿಮಾನ,ಗಂಡನಿಗೆ ಅಪಾರವಾದ ನಿಜವಾದ ಪ್ರೀತಿ, ಅಕ್ಕರೆ ತೋರಿಸುವ ತನ್ನ ಪ್ರೀತಿಯ ಹೆಂಡತಿ ಅನುಪಮ.ಇವರಿಬ್ಬರ ನಡುವೆ ಸತೀಶ್ ಸಿಕ್ಕಿ ಒದ್ದಾಡುತ್ತಾನೆ.ಈಗ ಶೋಭಾ ತನಗೆ ಅನಿಲ್ ಬೇಡ ಸತೀಶ್ ನಿಜವಾದ ಗಂಡನಾಗಲಿ ಎಂಬ ಹಠಕ್ಕೆ ಬೀಳುತ್ತಾಳೆ.ಅನುಪಮಾಳ ಬಗ್ಗೆ ಕೆಂಡ ಕಾರುತ್ತಿರುತ್ತಾಳೆ.ಸತೀಶ್ ಶೋಭಾಳ ಬಲೆಯಿಂದ ಆಚೆ ಬಂದು,ತನ್ನ ಪ್ರೀತಿಯ ಮಡದಿ ಅನಪಮಾಳೊಂದಿಗೆ ಸುಖ ಸಂಸಾರ ನಡೆಸುತ್ತಾನಾ? ವಿದೇಶದಿಂದ ವಾಪಸ್ ಬಂದ ಅನಿಲ್ ತನ್ನ ಮಾವನ ಮಗಳಾದ ಶೋಭಾ ಹಾಗೂ ಸತೀಶ್ ರ ಸಂಬಂಧ ಗೊತ್ತಾದ ಮೇಲೂ ಮದುವೆಯಾದನಾ? ಸತೀಶ್ ಕೆಲಸ ಹೋಯಿತಾ? ಮಗಳಿಗೆ ಜೀವನ ಮೌಲ್ಯಗಳನ್ನು ಕಲಿಸದ ರಘುಪತಿ ಮಗಳ ಜೀವನ ಹಾಳಾಗಲು ಕಾರಣರಾದರಾ? ಹಣ ಮತ್ತು ಭೋಗದ ಜೀವನದಲ್ಲಿ ಬಿದ್ದು ಭಾರತೀಯ ಸಂಸ್ಕೃತಿಯೇ ಗೊತ್ತಿಲ್ಲದ ವಿಧಿವಂಚಿತೆ ಶೋಭಾಳ ಜೀವನ ಏನಾಯಿತು? ಇವೆಲ್ಲಕ್ಕೂ ಉತ್ತರ ಈ ಕಾದಂಬರಿಯಲ್ಲಿದೆ.
©2024 Book Brahma Private Limited.