ಲೇಖಕ ವಿಜಯ ನಾಗ್ ಅವರು ಜಪಾನಿನ ಜುನ್ ಇಚಿರೋ ತಾನಿಜಾಕಿ ಅವರ "ಕಾಗೀ" ಎಂಬ ಕಾದಂಬರಿಯನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಬಲು ಸೊಗಸಾದ ಅನುವಾದ. ಮೂಲಕೃತಿಯಷ್ಟೆ ಈ ಅನುವಾದ ಸರಳತೆ ಮತ್ತು ಗಂಭೀರತೆಯಿಂದ ಕೂಡಿದ ಕೃತಿ. ಲೈಂಗಿಕ ಹಂಬಲ ಎನ್ನುವ ಹಿಡನ್ ಶಕ್ತಿಯೊಂದು ಹೊರಗೆ ಅನಾವರಣಗೊಳ್ಳುವಾಗ ಚಾಚಿಕೊಳ್ಳುವ ಮುಖಗಳ ಬಗ್ಗೆ ಪ್ರಶ್ನಿಸಿಕೊಳ್ಳುತ್ತಿದ್ದೇನೆ. ಗಂಡು ಮತ್ತು ಹೆಣ್ಣಿನ ನಡುವೆ ದೇಹ ಎನ್ನುವುದೇ ಎಲ್ಲದರ ಅಭಿವ್ಯಕ್ತ ಮಾಧ್ಯಮವೇ? ಎಂಬ ಅಪರಿಹಾರದ ಪ್ರಶ್ನೆ ಇದು. ಒಂದು ಕಡೆ ಪತಿಯ ಜೀವನಾಶಕ್ಕೆ ಪತ್ನಿ ಹೆಣೆದ ಬಲೆ ಮತ್ತು ಪತ್ನಿಯನ್ನು ಸಂತುಷ್ಟಿಗೊಳಿಸಲು ಪತಿ ಬಳಸಿದ ಮಾರ್ಗ ಎರಡು ಕೂಡ ಕೇಡಿನ ಕಾಮವೇ ಆಗಿದ್ದಾದರೂ ಯಾಕೆ ಎಂಬ ತಲ್ಲಣ.
ಪ್ರಶ್ನೆ ಮತ್ತು ಹುಟ್ಟಿಸುವ ತಲ್ಲಣಗಳ ನಡುವೇ ಬೀಗದ ಕೈ ನುಣುಚಿಕೊಳ್ಳುತ್ತದೆ. ಈ ಕಥನದ ಓದಿನ ಕೊನೆಗೆ ಇಲ್ಲಿನ ದಾಂಪತ್ಯ ಅಸಹ್ಯ ಹುಟ್ಟಿಸುವುದಕ್ಕಿಂತ, ಲೈಂಗಿಕ ತೃಷೆಯ ನೀಗಿಸಲಿಕ್ಕೇ ಪರವಾನಗಿ ಪಡೆದ ದಾಂಪತ್ಯದ ಕ್ರೂರ ದೇಹ ಸಂಬಂಧ ಕಾಡುತ್ತದೆ. ಇದು ಪತಿ-ಪತ್ನಿಯ ಮಧ್ಯದ ಅಶ್ಲೀಲತೆ ಜಿಗುಪ್ಸೆಗಿಂತಲೂ ವಿಷಾದ ಒಂದನ್ನು ತಣ್ಣಗೆ ಉಳಿಸಿ ಹೋಗುತ್ತದೆ. ಅವರವರು ತೆಗೆದುಕೊಳ್ಳುವ ನಿರ್ಧಾರಗಳೇ ಅವರವರ ಬಾಳಿನ ಪರಮ ನಂಬಿಕೆಗಳಾಗಿ ನಿಂತು ಬಿಡುವ ಕಟುಸತ್ಯ ಈ ಕಥಾನಕ ಅನಾವರಣಗೊಳಿಸುತ್ತದೆ ಎಂದು ಕವಿ ವಾಸುದೇವ ನಾಡಿಗರು ಸೊಗಸಾದ ಅರ್ಥಪೂರ್ಣ ಮುನ್ನುಡಿಯನ್ನು ಬರೆದಿದ್ದಾರೆ. "ಅರಿವಿನ ಬಾಗಿಲು ತೆರೆಯಲು ನೂರಾರು ಬೀಗದ ಕೈ" ಇದು ನಾಡಿಗರ ಮುನ್ನುಡಿಯ ಶೀರ್ಷಿಕೆ.
©2024 Book Brahma Private Limited.