ಕನ್ನಡ ಓದುಗರು ಬೇರೆ ನಾಡಿನ, ಬೇರೆ ನುಡಿಯ ಸಾಹಿತ್ಯ ಕೃತಿಗಳನ್ನು ಓದುತ್ತಲೇ ಬಂದಿದ್ದಾರೆ. ಓದುಗರಿಗೆ ಅಂತಹ ಕೃತಿಗಳನ್ನು ಒದಗಿಸಲು ಹಲವು ದಾರಿಗಳನ್ನು ಕಂಡುಕೊಳ್ಳಲಾಗಿದೆ. ಕೃತಿಗಳನ್ನು ಸಂಗ್ರಹರೂಪದಲ್ಲಿ ಕನ್ನಡದಲ್ಲಿ ಮರುನಿರೂಪಿಸುವುದು ಅಂತಹ ಒಂದು ದಾರಿಯಾಗಿದೆ. ಇದು ಥಾಮಸ್ ಹಾರ್ಡಿ ಅವರ ಕಾದಂಬರಿಯ ಮರುನಿರೂಪಣೆ. ಥಾಮಸ್ ಹಾರ್ಡಿ ಎಲ್ಲ ಕಾಲಕ್ಕೂ ಓದುಗ ವರ್ಗವನ್ನು ಪಡೆದ ಮುಖ್ಯ ಇಂಗ್ಲಿಷ್ ಕಾದಂಬರಿಕಾರರಲ್ಲೊಬ್ಬರು. ವಿಕ್ಟೋರಿಯನ್ ಯುಗದ ಇಂಗ್ಲೆಂಡಿನ ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳ ಸುತ್ತ ಹೆಣೆಯಲ್ಪಟ್ಟಿರುವ ಕಥೆಯನ್ನು ಹಾಗೂ ಹಾರ್ಡಿಯ ಗಾಢ ದುರಂತ ದರ್ಶನದ ಮೂಲಕ ಸೃಷ್ಟಿಯಾದ ಜೂಡ್ ದ ಅಬ್ ಸ್ಕ್ಯೂರ್ ಅವರ ಕೊನೆಯ ಕಾದಂಬರಿ. ಮದುವೆ, ಚರ್ಚು, ಶಿಕ್ಷಣ ಮೊದಲಾದ ವ್ಯವಸ್ಥೆಗಳ ಸ್ವರೂಪ ಇಲ್ಲಿ ವಿಸ್ತಾರವಾಗಿ ವಿವರಿಸಲ್ಪಟ್ಟಿದೆ. ಧಾರ್ಮಿಕ ಅಭಿಪ್ರಾಯಗಳಲ್ಲಿ ಆಗುತ್ತಿದ್ದ ಬದಲಾವಣೆಗಳು, ಅಂದಿನ ಸಾಮಾಜಿಕ ಘರ್ಷಣೆಗಳು ತೆಗೆದುಕೊಳ್ಳುತ್ತಿದ್ದ ನಾಟಕೀಯ ತಿರುವುಗಳನ್ನು ಅತ್ಯಂತ ನೇರವಾಗಿ, ನಿಷ್ಠುರವಾಗಿ ಚಿತ್ರಿಸಿರುವ ಹಾರ್ಡಿ ಈ ಕಾದಂಬರಿಯನ್ನು ಬರೆದಾದ ಬಳಿಕ ಎದುರಿಸಬೇಕಾಗಿ ಬಂದ ಸವಾಲುಗಳು ಸಮಸ್ಯೆಗಳು ಒಂದೆರಡಲ್ಲ. ಜೂಡ್ ಹಾಗೂ ಸ್ಯೂ ಎಂಬ ಎರಡು ಕೇಂದ್ರ ಪಾತ್ರಗಳು ಭಿನ್ನ ಧಾರ್ಮಿಕ ನಿಲುವುಗಳನ್ನು ಹೊಂದಿದ್ದರೂ, ಅವೇ ನಿಲುವುಗಳು ಸಂಪೂರ್ಣವಾಗಿ ಅದಲು ಬದಲಾಗುವ ಸನ್ನಿವೇಶಗಳು ಕಾದಂಬರಿಗೆ ಒಂದು ವಿಶಿಷ್ಟ ಆಯಾಮವನ್ನೇ ದೊರಕಿಸಿಕೊಟ್ಟಿವೆ.
©2024 Book Brahma Private Limited.