ಭೀಷ್ಮ ಸಾಹನಿ ಪ್ರಗತಿಪರ ವಲಯಗಳಲ್ಲಿ ಆತ್ಮೀಯ ಚಿರಪರಿಚಿತ ಹೆಸರು. 1973 ರಲ್ಲಿ ಮೊದಲು ಪ್ರಕಟವಾದ 'ತಮಸ್' ಕಾದಂಬರಿ 1975ರಲ್ಲಿ ಸಾಹನಿ ಯವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟಿತು. 'ಲೋಟಸ್' ಅಂತರಾಷ್ಟ್ರೀಯ ಪುರಸ್ಕಾರವನ್ನೂ ಸಾಹನಿಗಳಿಸಿಕೊಂಡಿದ್ದಾರೆ.
ಕಾದಂಬರಿಯು ಗೋವಿಂದ ನಿಹಲಾನಿಯವರ ನಿರ್ದೇಶನದಲ್ಲಿ ದೂರದರ್ಶನದಲ್ಲಿ ಧಾರಾವಾಹಿಯಾಗಿ ಪ್ರಸಾರಗೊಂಡು ಒಂದು ಕೋಲಾಹಲವನ್ನೇ ಸೃಷ್ಟಿಸಿತು. ಈ ಕೋಲಾಹಲ ಹಿಂದು-ಮುಸ್ಲಿಂ ಕೋಮುವಾದಿಗಳ ಕೀಳು ಮನಸ್ಸನ್ನು ನಿಚ್ಚಳವಾಗಿ ಬಯಲಿಗೆಳೆಯಿತು.
ಭೀಷ್ಮ ಸಾಹನಿಯವರಿಗೆ ಮತ್ತಷ್ಟು ಪ್ರಚಾರ, ಖ್ಯಾತಿಯನ್ನು ತಂದುಕೊಟ್ಟಿತು. ಇನ್ನೊಂದು ರೀತಿಯಲ್ಲಿ ಈ ವಿವಾದವು 'ತಮಸ್' ಎಷ್ಟು ಸಮಕಾಲೀನ, ಅದು ಎತ್ತಿಕೊಂಡಿರುವ ಸಮಸ್ಯೆಗಳು ಇನ್ನೂ ಜೀವಂತವಾದವು ಎಂಬುದನ್ನು ಸ್ಪಷ್ಟವಾಗಿ ಎತ್ತಿ ತೋರಿಸಿತು. ನಲವತ್ತರ ದಶಕದ ಈ ಕತೆ ಈ ಕಾಲದಲ್ಲಿಯೂ ಎಲ್ಲ ಬಗೆಯ ಓದುಗರನ್ನು ಸೆಳೆಯುತ್ತಿದೆ.
35ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ 'ತಮಸ್' ಚಿತ್ರವು ರಾಷ್ಟ್ರೀಯ ಏಕತೆಗಾಗಿ ನೀಡುವ ನರ್ಗಿಸ್ದತ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇಂಗ್ಲಿಷ್ ಮತ್ತು ಪಂಜಾಬಿ ಭಾಷೆಗಳಿಗೂ 'ತಮಸ್' ಈಗಾಗಲೇ ಅನುವಾದಗೊಂಡಿದೆ. ಹಿಂದಿ ಭಾಷೆಯ ಒಂದು ಒಳ್ಳೆಯ ಕಾದಂಬರಿಯನ್ನು ಓದಬಲ್ಲ ಕನ್ನಡದಲ್ಲಿ ಓದುಗರಿಗೆ ನೀಡಿರುವ ಅನುವಾದಕರ ಪ್ರಯತ್ನ ಪ್ರಶಂಸನೀಯ.
©2024 Book Brahma Private Limited.