ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ಪುರಸ್ಕೃತರ ಮಾಲೆಯಡಿ ಪ್ರಕಟವಾಗಿರುವ 'ಸೂರ್ಯಕಾಂತಿಗಳ ಮಡಿಲಲ್ಲಿ' ಕೃತಿಯು ಇರ್ವಿಂಗ್ ಸ್ಟೋನ್ ನ ‘ಲಸ್ಟ್ ಫಾರ್ ಲೈಫ್’ ಕಾದಂಬರಿಯ ಕನ್ನಡ ಅನುವಾದವಾಗಿದೆ.
ಈ ಕಾದಂಬರಿಯ ಕಥಾನಾಯಕ ಯುಗ ಪ್ರವರ್ತಕ ಜಗದ್ವಿಖ್ಯಾತ ವರ್ಣಚಿತ್ರ ಕಲಾವಿದ ವಿನ್ಸೆಂಟ್ ವಾನ್ ಗೋ. ಆದರೆ ವಿನ್ಸೆಂಟ್ನ ಬದುಕು ಸರಳ ರೇಖಾತ್ಮಕವಲ್ಲ. ವಕ್ರೀಭವಿಸಿದ ಸಂಕೀರ್ಣ ಸೂರ್ಯಕಾಂತಿ ಸ್ವರೂಪದ್ದು. ವಿನ್ಸೆಂಟ್ನ ಆತ್ಮ ಬೆಂಕಿಯಲ್ಲಿ ಅರಳಿದ ಹೂವು. ಇದು ಪ್ರವಾಹಕ್ಕ ಎದುರಾಗಿ ಈಜುವ ಹತ್ತುಮೀನು. ಆ ಹತ್ತುಮೀನನ್ನು ಕತ್ತರಿಸಲು ಆಯಕಟ್ಟಿನ ಸ್ಥಳಗಳಲ್ಲಿ ಕತ್ತಿ ಹಿಡಿದು ನಿಂತ ಮೀಂಗುಲಿಗರಿಂದ ಅದು ತಪ್ಪಿಸಿಕೊಂಡು ಗುರಿಮುಟ್ಟಲು ಪಟ್ಟಪಾಡು ಇಟ್ಟಹೆಜ್ಜೆ ಎದೆ ಕರಗಿಸುವಂತಿದೆ. ಲೋಕಭಾವಿಸುವಂತೆ ಯಾವನೇ ಪ್ರತಿಭಾನ್ವಿತ ಕವಿ ಕಲಾವಿದನಿರಲಿ ಅವನಲ್ಲಿ ಕೆಲ ಪ್ರಮಾಣದ ಹುಚ್ಚುತನ (MADNESS) ಮನೆಮಾಡಿರುತ್ತದೆ. ಆದರೆ ಅದನ್ನು ಲೋಕಶಿಕ್ಷಣದ ಮೂಲಕ ಸರಿದಾರಿಗೆ ತಿರುಗಿಸಿದರೆ ಮಾತ್ರ ಬೆಳೆ ನಳನಳಿಸುತ್ತದೆ.
ವಿನ್ಸೆಂಟ್ ವಾನ್ ಗೋನದು ಸಹ ಇಂಥ ವಿಕ್ಷಿಪ್ತ ಮನಃಸ್ಥಿತಿ. ಅವನ ಮನಸ್ಸು ಸುತ್ತಲಿನ ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆಗೆ ಸದಾ ಸಿಡಿಮಿಡಿಗೊಳ್ಳುತ್ತದೆ. ಹಾಗೆ ನೋಡಿದರೆ ವಿನ್ಸೆಂಟ್ ಕಲಾವಿದರಲ್ಲಿ ಪ್ರಥಮ ಕಮ್ಯುನಿಸ್ಟ್ ಎನ್ನಬಹುದು. ಪ್ರತಿಕೂಲ ಪರಿಸ್ಥಿತಿಗೆ ಎದುರಾಗಿ ಹೋರಾಡುತ್ತ ಬದುಕಿನ ಋಜುತ್ವವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಾನೆ. ಅವನ ದಯೆ, ಕರುಣೆ, ಜೀವಾನುಕಂಪ ವಿಶ್ವಾತ್ಮಕ. ಅದಕ್ಕೆ ಅಡ್ಡಿಬರುವ ವಸ್ತು, ವಿಷಯ ವ್ಯಕ್ತಿಗಳ ವಿರುದ್ಧ ಹರಿಹಾಯ್ದು ದಂಗೆ ಏಳುತ್ತಾನೆ.
ವಿನ್ಸೆಂಟ್ ವಾನ್ ಗೋನ ನವಸಮಾಜ ಪರಿಕಲ್ಪನೆಯು ಅವನ ಪ್ರತಿಯೊಂದು ಸ್ಕೆಚ್, ಲ್ಯಾಂಡ್ಸ್ಕೇಪ್, ವ್ಯಕ್ತಿಚಿತ್ರ, ನಿಸರ್ಗ ದೃಶ್ಯಗಳಲ್ಲಿ ಒಡಮೂಡಿ ಪ್ರತಿಬಿಂಬಿತವಾಗುತ್ತದೆ; ಸಂಚಲನಗೊಳ್ಳುತ್ತದೆ. ಅಲ್ಲಿ ಮಿಡಿಯುವ ಅವನ ಚೇತನಾತ್ಮಕ ಬೆಳಕು ಸೂಕ್ಷ್ಮ ಸಂವೇದನೆಯುಳ್ಳವರಿಗೆ ಮಾತ್ರ ನಿಲುಕುವಂತಹುದು. ಆ ಬೆಳಕು ಸದಾ ತುಳಿತಕ್ಕೊಳಗಾದ ಸಮಾಜದ ಕಡೆಗೇ ಕೇಂದ್ರೀಕೃತವಾಗಿರುತ್ತದೆ.
©2024 Book Brahma Private Limited.