ಸಿನಿಮೀಯ ದೃಶ್ಯ ಮತ್ತು ನಾಟಕೀಯ ತಿರುವುಗಳಿರುವ ಅಲೆಸ್ಸೆಂಡ್ರೊ ಬ್ಯಾರಿಕೊನ ಕಿರುಕಾದಂಬರಿ Without Blood, ವಸ್ತು ಹಾಗೂ ಗಾತ್ರದ ದೃಷ್ಟಿಯಿಂದ ನೀಳ್ಗತೆಯಂತಿರುವ ಈ ಕೃತಿಯು ಸಂಭಾಷಣಾ ಪ್ರಧಾನ ನಿರೂಪಣಾ ತಂತ್ರ ಒಳಗೊಂಡಿದೆ. ಇಟಾಲಿಯಾ ಭಾಷೆಯಿಂದ ಇಂಗ್ಲಿಷಿಗೆ ಅನುವಾದಗೊಂಡಿರುವ ಕೃತಿಯನ್ನು ಸುಭಾಷ್ ರಾಜಮಾನೆ ಅವರು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಕ್ರೌರ್ಯ-ಹಿಂಸೆಯ ಮೂಲಕ ಆರಂಭವಾಗುವ ಈ ಕಾದಂಬರಿಯು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಜೀವಪರ ಕಾಳಜಿಯ ಕೈಮ್ಯಾಕ್ಸ್ ಗಮನ ಸೆಳೆಯುತ್ತದೆ. ಓ ಹೆನ್ರಿಯ ಸಣ್ಣಕತೆಗಳಲ್ಲಿ ಇರುವ ಹಠಾತ್ ಬೆರಗು-ಅಚ್ಚರಿ ಮೂಡಿಸುವ ಅಂತ್ಯದ ಮಾದರಿ ಈ ಕಾದಂಬರಿಯಲ್ಲಿಯೂ ಇದೆ. ಕತೆಯುದ್ದಕ್ಕೂ ಇರುವ ಪಾತ್ರ, ವಿವರಗಳು “ಅಂತ್ಯ'ಕ್ಕಾಗಿ ದುಡಿಯುತ್ತಿರುತ್ತವೆ. ಇಟಾಲಿಯಾ ಹಾಗೂ ಇಂಗ್ಲಿಷಿನ ಮೂಲಕ ಯುರೋಪಿನ ಓದುಗರಿಗೆ ಪ್ರಿಯವಾಗಿದ್ದ ಈ ಕಾದಂಬರಿಯ ನೇಯ್ಗೆ ರೀತಿ ಓದುಗನಲ್ಲಿ ಆಸಕ್ತಿ ಹುಟ್ಟಿಸಿ, ಕುತೂಹಲ ಹೆಚ್ಚಿಸಿ ಅದನ್ನು ತಣಿಸುತ್ತದೆ. ಒಂದು ಕರಾಳ ರಾತ್ರಿಯ ಹಿಂಸಾತ್ಮಕ ದಾಳಿ ಇಡೀ ಕುಟುಂಬದ “ನಾಶ' ಹಾಗೂ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿಯುವ ನೈನಾಳ ಆಘಾತಕ್ಕೆ ಕಾರಣವಾಗುತ್ತದೆ. ಐದು ದಶಕಗಳ ನಂತರ ಹತ್ಯೆಯ ಭಾಗವಾಗಿದ್ದೂ ಬದುಕುಳಿದಿದ್ದ ಏಕೈಕ ವ್ಯಕ್ತಿ ಹಾಗೂ ನೈನಾಳ ನಡುವಿನ ಮುಖಾಮುಖ, ಮಾತು-ಕತೆ, ನೆನಪುಗಳು, ಕರುಣೆ, ಕ್ಷಮೆ, ಮಾನವೀಯತೆಗಳನ್ನು ಹಿಡಿದಿಡುತ್ತವೆ. ಒಂದು ಸೃಜನಶೀಲ ಸಾಹಿತ್ಯ ಕೃತಿಯ ಸೊಗಸಾದ ಓದಿನ ಅನುಭವ ಕಟ್ಟಿಕೊಡುವ ಕಾದಂಬರಿಯಿದು.
©2024 Book Brahma Private Limited.