"ಪ್ರೀತಿಯೇ ಕಾರಣ ಪ್ರೀತಿಯೇ ಉದ್ದೇಶ" ಎಂಬ ಉತ್ಕಟ ಪ್ರೇಮ ಮತ್ತು ಬದುಕಿನ ಮುಖಾಮುಖಿತನವನ್ನು ತೆರೆದುಕೊಳ್ಳುವ ಕೃತಿಯೇ "ಪ್ರೀತಿಯ ನಲವತ್ತು ನಿಯಮಗಳು" . ಟರ್ಕೀಸ್ ಬರಹಗಾರ್ತಿ ಎಲಿಫ಼್ ಶಫಾ಼ಕ್ ಅವರ ಕಾದಂಬರಿಯನ್ನು ಕನ್ನಡಕ್ಕೆ ಕವಯತ್ರಿ, ಅನುವಾದಕಿ ಡಾ. ಮಮತಾ ಜಿ. ಸಾಗರ ಅದ್ಭುತ ಕಲಾಕೃತಿಯಾಗಿ ರೂಪಾಂತರಿಸಿದ್ದಾರೆ.
ರೂಮಿ ಮತ್ತು ಅವನ ಸಂಗಾತಿ ಮತ್ತು ಗುರುವೂ ಆದ ತಬ್ರುಜ಼್ ನ ಬದುಕಿನ ಭಾವಾಂತರವನ್ನು ವಿವರಿಸುವಾಗಲೆಲ್ಲ ನಮ್ಮೊಳಗಿನ ಪ್ರೇಮದ ಕೂಸಿಗೆ ಮಾತಾಡಬೇಕೆನಿಸುತ್ತದೆ. ಲೋಕವನ್ನೆ ತನ್ನೊಳಗೆ ಎನ್ನುವ ಮಾತೃತ್ವದ ಸೂಫಿ ತತ್ವ ಹಾಗೂ ಮನುಷ್ಯ ಸಂಬಂಧ ಕಾವ್ಯ ಚಿತ್ರವೆ ಈ ಕೃತಿಯ ಆತ್ಮವೆಂದರೆ ತಪ್ಪಾಗಲಾರದು. ಧಾರ್ಮಿಕ ಮೂಲಭೂತವಾದಗಳು, ನಮ್ಮ ಜಗತ್ತುಗಳನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿರುವ ಹೊತ್ತಿನಲ್ಲಿ ಪ್ರೀತಿಯ ಬಗ್ಗೆ ಮಾತನಾಡುವುದು ಅವಶ್ಯಕವಾಗಿರುವ ಹೊತ್ತಿಗೆ ’ಪ್ರೀತಿಯ ನಲವತ್ತು ನಿಯಮಗಳು’ ಘಟಿಸಿತು.
ರಾಷ್ಟ್ರಪ್ರೇಮದ ಅಳತೆಗೋಲುಗಳು ಅಳೆದಳೆದು ಉದ್ದಗಲ ಪ್ರೀತಿಯ ಹಾಗೂ ನಂಬಿಕೆಯ ನೆಲೆಗಳನ್ನು ಜಗ್ಗಿ ಬಿಟ್ಟಿವೆ. ಪ್ರೀತಿಯ ನಲವತ್ತು ನಿಯಮಗಳು ಕಾದಂಬರಿಯಲ್ಲಿನ ಅಸಾಧಾರಣ ಘಟನೆಗಳು, ಪಾತ್ರಗಳು, ಸಂಬಂಧಗಳು, ಧಾರ್ಮಿಕ ಮೂಲಭೂತವಾದದೊಳಗಿರುವ ದ್ವೇಷಗಳನ್ನು ಕುರಿತು ಚರ್ಚಿಸುತ್ತದೆ.
©2024 Book Brahma Private Limited.