ಇಂಗ್ಲೀಷ್ ಲೇಖಕ ಜಾರ್ಜ್ ಆರ್ವೆಲ್ 1945ರಲ್ಲಿ ಬರೆದ 'ಅನಿಮಲ್ ಫ್ಹಾರ್ಮ್' ಕಾದಂಬರಿ ಡಿಸ್ಟೋಪಿಯಾ (ವಿಕೃತ ಸಮಾಜ) ಎಂದೇ ಪ್ರಸಿದ್ಧವಾಗಿದೆ. ಒಂದು ಫ್ಹಾರ್ಮ್ ನಲ್ಲಿದ್ದ ಹಂದಿ, ಕುದುರೆ, ಇತ್ಯಾದಿ ಪ್ರಾಣಿಗಳು ತಮ್ಮ ಯಜಮಾನನ ವಿರುದ್ಧ ದಂಗೆ ಎದ್ದು ತಮ್ಮದೇ ಪ್ರಭುತ್ವವನ್ನು ಸ್ಥಾಪಿಸುವ ಕಥೆಯುಳ್ಳ ಈ ಕೃತಿ ಅನ್ಯೋಕ್ತಿ ತಂತ್ರದ ಮೂಲಕ 20 ನೇ ಶತಮಾನದ ಆದಿಭಾಗದಲ್ಲಿ ನಡೆದ ರಷ್ಯನ್ ಮಹಾಕ್ರಾಂತಿ, ಕಮ್ಯೂನಿಸ್ಟ್ ಆಡಳಿತ, ಸ್ಟಾಲಿನ್ ನ ಸರ್ವಾಧಿಕಾರಿ ನೀತಿ ಇತ್ಯಾದಿ ಕಟುವಾಗಿ ವಿಡಂಬಿಸುತ್ತದೆ.
ಆರ್ವೆಲ್ ವಿಡಂಬಿಸುವುದು ಕಮ್ಯೂನಿಜಂ ತತ್ವಗಳನ್ನಲ್ಲ, ಸರ್ವ ಸಮಾನತೆಯ ಆದರ್ಶಗಳನ್ನು ಒಡಲಲ್ಲಿ ಕಟ್ಟಿಕೊಂಡು ಬಂದ ಒಂದು ಕ್ರಾಂತಿ ಹೇಗೆ ಅದರ ನಾಯಕರ ಸ್ವಾರ್ಥ ಹಾಗೂ ಸರ್ವಾಧಿಕಾರಿ ಧೋರಣೆಗಳಿಂದಾಗಿ ತನ್ನ ಎಲ್ಲ ಮೌಲ್ಯಗಳನ್ನೂ ಕಳೆದುಕೊಂಡು ವಿಫಲವಾಗುತ್ತದೆ ಎಂಬುದನ್ನು ಗಾಢ ವಿಷಾದದಿಂದ ಚಿತ್ರಿಸುತ್ತದೆ.
ಎಲ್ಲ ಪ್ರಾಣಿಗಳೂ ಸಮಾನರು ಎಂಬ ಕ್ರಾಂತಿಯ ತತ್ವ. ’ಎಲ್ಲ ಪ್ರಾಣಿಗಳೂ ಸಮಾನರು ಆದರೆ ಕೆಲವು ಪ್ರಾಣಿಗಳು ಹೆಚ್ಚು ಸಮಾನರ” ಎಂದು ತಿದ್ದುಪಡಿಗೊಳ್ಳುವುದು ಆರ್ವೆಲ್ ನ ಕಟು ವ್ಯಂಗ್ಯವನ್ನಷ್ಟೇ ಅಲ್ಲದೆ, ಕ್ರಾಂತಿಯ ಸಂಪೂರ್ಣ ವೈಫಲ್ಯವನ್ನು ಒಟ್ಟಿಗೆ ದಾಖಲಿಸುತ್ತದೆ. ಕಳೆದ ಶತಮಾನದ ಮಹತ್ವದ ರಾಜಕೀಯ ಕಾದಂಬರಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಈ ಕೃತಿಯನ್ನು ’ಪ್ರಾಣಿಗಳ ಪ್ರಭುತ್ವ ’ ಹೆಸರಿನಲ್ಲಿ ಲೇಖಕಿ ಡಾ.ವಿಜಯಾ ಸುಬ್ಬರಾಜ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.