‘ಒಡೆದ ಕನ್ನಡಿ’ ಆಫ್ರಿಕಾದ ಸಂದೇದನಾಶೀಲ ಸಾಹಿತಿ ಚಿನುವ ಅಚಿಬೆ ಅವರ Things Fall Apart ಎಂಬ ಕಾದಂಬರಿಯ ಕನ್ನಡಾನುವಾದ. ಈ ಕೃತಿಯನ್ನು ಕನ್ನಡದ ಹಿರಿಯ ಲೇಖಕಿ ಡಾ. ವಿಜಯಾ ಸುಬ್ಬರಾಜ್ ಅವರು ಕನ್ನಡೀಕರಿಸಿದ್ದಾರೆ. ಲೇಖಕ ಪ್ರಮೋದ್ ಮುತಾಲಿಕ ಅವರು ಬೆನ್ನುಡಿ ಬರೆದಿದ್ದಾರೆ. ‘Things Fall Apart’ ಒಂದು ಸ್ವತಂತ್ರ ಕಾದಂಬರಿ ಅನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ ಎನ್ನುತ್ತಾರೆ ಪ್ರಮೋದ್. ಆಫ್ರಿಕಾ ಖಂಡದ ಅದರಲ್ಲೂ ನೈಜೀರಿಯಾ ದೇಶದ ಅತ್ಯಂತ ಹಿಂದುಳಿದ ಪಶ್ಚಿಮ ಭಾಗದ ಜನಾಂಗವೊಂದರ ಬದುಕಿನಲ್ಲಿಯ ಸಂಕ್ರಮಣಕಾಲವೊಂದರ ದಟ್ಟ ಚಿತ್ರಣವನ್ನು ಈ ಕಾದಂಬರಿ ನೀಡುತ್ತದೆ.
ಆಫ್ರಿಕಾ ಖಂಡದ ಬಗ್ಗೆ ಬಂದ ಒಟ್ಟಾರೆ ಚಿತ್ರಣಗಳಲ್ಲಿ ಇದು ಬಹಳ ಅಥೆಂಟಿಕ್. ಅಚಿಬೆ ಬರೆಯುವುದಕ್ಕೆ ಮುಂಚೆ ಇವರ ಬಗ್ಗೆ ಹೆಚ್ಚಾಗಿ ಬರೆದವರು ಬ್ರಿಟಿಷ್ ಲೇಖಕರು. ಹೆಚ್ಚಿನಂಶದ ಲೇಖಕರು ಆಫ್ರಿಕಾ ಸಂಸ್ಕೃತಿಯ ವಿಷಮ ಗುಣಗಳ ಮೇಲೆಯೇ ಒತ್ತು ಕೊಟ್ಟಿದ್ದರು. ಅದರಲ್ಲೂ ಮುಖ್ಯವಾಗಿ ಅವರ ತೀರಾ ಅವ್ಯವಸ್ಥೆಯಲ್ಲಿದ್ದ ಬದುಕಿನ ಕ್ರಮ, ನಂಬಿಕೆಗಳು, ಇವು ವಿಶೇಷ ಗಮನ ಸೆಳೆಯಲ್ಪಡುತ್ತಿದ್ದವು. ಆದರೆ ಇವುಗಳ ಚಿತ್ರಣ ಕೆಲ ಸಲ ಅತಿರೇಕಕ್ಕೂ ಹೋಗಿಬಿಡುತ್ತಿತ್ತು. ಈ ಹಿನ್ನೆಲೆಯಲ್ಲಿ ಆಫ್ರಿಕಾದ ಸಂವೇದನಾಶೀಲ ಲೇಖಕರು, ಇಂಥ ಪ್ರಯತ್ನಗಳಿಗೆ ಮಾರುತ್ತರವಾಗಿ, ಅಲ್ಲಿಯ ಜನಾಂಗದ ಬದುಕಿನ ವಿಧಾನ, ಅವರ ನಂಬುಗೆಗಳು, ಅವರ ಆಚಾರ-ವಿಚಾರ ಇವೆಲ್ಲವುಗಳ ಅರ್ಥವಂತಿಕೆಯನ್ನು ಕಲಾತ್ಮಕವಾಗಿ ಚಿತ್ರಿಸುವ ಪ್ರಯತ್ನವನ್ನು ಮಾಡಿದರು. ಈ ಸಂದರ್ಭದಲ್ಲಿ ಅಚಿಬೆ, ವೋಲೆ ಸೋಯಿಂಕಾ, ರಿಚರ್ಡ್ ರೀವ್, ಅಲೆಕ್ಸ್, ಲಾ-ಗುಮಾ ಗಮನಾರ್ಹ, ಗಟ್ಟಿಯಾದ ಸಾಹಿತ್ಯವನ್ನು ಸೃಷ್ಟಿಸಿದರು. ಈ ಕೃತಿ ಆ ಪ್ರಯತ್ನದ ಫಲವಾಗಿ ಮೂಡಿಬಂದದ್ದು ಎನ್ನಬಹುದು.
©2024 Book Brahma Private Limited.