ಖ್ಯಾತ ಕತೆಗಾರ ಯಶವಂತ ಚಿತ್ತಾಲರ ಮೊದಲ ಕಾದಂಬರಿ 'ಮೂರು ದಾರಿಗಳು’. ಈ ಕಾದಂಬರಿಯು ಮುಖ್ಯವಾಗಿ ಒಂದು ಪ್ರದೇಶದ ಅನುಭವವನ್ನು ಕಟ್ಟಿಕೊಡುತ್ತದೆ. ಹೀಗಾಗಿ ಇದನ್ನು ಪ್ರಾದೇಶಿಕ ಕಾದಂಬರಿ ಎಂದು ಕರೆಯಲಡ್ಡಿಯಿಲ್ಲ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಜನಜೀವನವನ್ನು ಚಿತ್ರಿಸುವ ಪ್ರಥಮ ಕಾದಂಬರಿ. ಈ ಮೊದಲು ವಿ.ಜಿ. ಭಟ್ಟ, ವಿ.ಜಿ. ಶಾನಭಾಗ ಹಾಗೂ ಯಶವಂತರ ಕತೆಗಳಲ್ಲಿ ಉತ್ತರ ಕನ್ನಡದ ಜೀವನ ದಾಖಲಾಗಿದೆ. ಆದರೆ, ಮೂರುದಾರಿಗಳು ಕಾದಂಬರಿಯಲ್ಲಿ ಅದು ಕಾದಂಬರಿಯಂತಹ ವಿಸ್ತೃತ ಸಾಹಿತ್ಯ ಪ್ರಕಾರ ಸೇರಿದ್ದು ಬಹುಶಃ ಇದೇ ಮೊದಲು.
’ಮೂರು ದಾರಿಗಳು’ ಕಾದಂಬರಿಯಲ್ಲಿಯ ಪ್ರಾದೇಶಿಕತೆಯ ವೈಶಿಷ್ಟವು ಕೇವಲ ಹಿನ್ನೆಲೆಯಾಗಿ ಮಾತ್ರ ಬರುವುದಿಲ್ಲ. ಅದು ಕತೆಯ ಭಾಗವಾಗಿಯೇ ಬರುತ್ತದೆ. ಈ ಕಾದಂಬರಿಯ ಬಹುತೇಕ ಪಾತ್ರಗಳು ಕರಾವಳಿ ಪ್ರದೇಶದ ಅಲ್ಲಿಯ ಸಮಾಜಕ್ಕೆ ನಿಕಟವಾಗಿ ಸಂಬಂಧಿಸಿದವುಗಳು. ಜೀವನದೊಡಲಿನಿಂದ ಅವರ ವ್ಯಕ್ತಿತ್ವ ರೂಪುಗೊಂಡಿದೆ. ಹಾಗೂ ಆ ಕಕ್ಷೆಯಲ್ಲಿಯೇ ಅವರ ವೈಯಕ್ತಿಕ ಜೀವನ ನಡೆಯುತ್ತದೆ.
ಈ ಕಾದಂಬರಿ ಕುರಿತು ಮತ್ತೊಬ್ಬ ಕತೆಗಾರ-ಕಾದಂಬರಿಕಾರ ಶಾಂತಿನಾಥ ದೇಸಾಯಿ ಅವರು ಹೀಗೆ ಬರೆದಿದ್ದಾರೆ- ಚಿತ್ತಾಲರ ಜ್ವಲಂತವಾದ ಕಲಾಪ್ರತಿಭೆ ಹಾಗೂ ಸದೈವ ಬೆಳೆಯುತ್ತಿರುವ ಜೀವನಾನುಭವ ಈ ಮೊದಲೇ ಕಾದಂಬರಿಗಳನ್ನು ಸೃಷ್ಟಿಸಬೇಕಾಗಿತ್ತು. ಆದರೆ ಅವರ ಕಥನ ಪ್ರತಿಭೆ ಸಣ್ಣ ಕತೆಯ ಸಾಹಿತ್ಯ ಪ್ರಕಾರಕ್ಕೆ ಮಾತ್ರ ಅಂಟಿಕೊಂಡಿತ್ತು. ಮುಂದೆ, ಅವರು ಬರೆಯಬೇಕೆಂದುಕೊಂಡಿದ್ದ ಒಂದು ಸಣ್ಣ ಕತೆ (ಹನೇಹಳ್ಳಿಯ ದುರಂತ) ತನ್ನಿಂದ ತಾನೇ ಅವರ ವಿಶಿಷ್ಟವಾದ ಕಾವು ಕೊಡುವ ಮನಸ್ಸಿನಲ್ಲಿ ಬೆಳೆದು ಕಾದಂಬರಿಯ ಸಂಕೀರ್ಣ ಸಾಹಿತ್ಯ ಪ್ರಕಾರಕ್ಕೆ ಹಾತೊರೆಯಿತು. ದೀರ್ಘಕಾಲದ ಚಿಂತನೆ, ತಡೆತಡೆದು ಮುನ್ನಡೆಯುವ ಲೇಖನ ಇವುಗಳ ಪರಿಣಾಮವನ್ನು ನಾವು ಈ ಕಾದಂಬರಿಯಲ್ಲಿ ಸ್ಪಷ್ಟ ನೋಡಬಹುದು: ದೀರ್ಘ ಚಿಂತನೆಯಿಂದ ಕೆಲವು ಪಾತ್ರಗಳೂ ಘಟನೆಗಳೂ ಹೆಚ್ಚು ಸಜೀವವಾದರೆ, ಕೆಲವು ಹೆಚ್ಚು ಸಂಕೀರ್ಣವಾಗಿವೆ; ಕೆಲವು ಹೆಚ್ಚು ಪ್ರಗಲ್ಪವಾದರೆ, ಕೆಲವು ಹೆಚ್ಚು ಕ್ಲಿಷ್ಟವಾಗಿವೆ. ನಿಂತು ನಿಂತು ಬರೆದದ್ದಕ್ಕೆ ಕೆಲವು ಸಲ ಅನವಶ್ಯಕವೆನಿಸಬಹುದಾದ ಸಂಗತಿಗಳು ನುಸುಳಿಕೊಂಡರೂ, ಹಾಗೆ ಬರೆದ ರೀತಿಯೇ ಕಾದಂಬರಿಯ ಮೂರು ಪುಸ್ತಕಗಳ ಪಾತ್ರವೈವಿಧ್ಯಕ್ಕೆ, ತಂತ್ರವೈವಿಧ್ಯಕ್ಕೆ, ಬೇರೆ ಬೇರೆ ಉದ್ದೇಶಗಳನ್ನು ಸುಂದರವಾಗಿ ಹೆಣೆಯುವುದಕ್ಕೆ ತುಂಬ ಅವಕಾಶವನ್ನು ಕಲ್ಪಿಸಿ ಕೊಟ್ಟಿತೆನ್ನಲು ಅಡ್ಡಿಯಿಲ್ಲ.
©2024 Book Brahma Private Limited.