ಬಾವಿಯೊಳಗಿನ ಕಪ್ಪೆ ತನ್ನ ಜಗತ್ತೇ ದೊಡ್ಡದು, ಶ್ರೇಷ್ಠ ಎಂಬ ಭಾವನೆಯಿಂದ ಇನ್ನೊಂದು ಜಗತ್ತು ಇಲ್ಲ ಎಂಬ ಭ್ರಮೆಯಲ್ಲಿ ಬದುಕುತ್ತದೆ. ಹೊರಜಗತ್ತೊಂದು ಇದೆಯಾದರೂ, ಅದರ ಬಗ್ಗೆ ತಿಳಿಯಲು ಕೂಡ ಮುಂದಾಗುವುದಿಲ್ಲ. ಅನುಭವದ ಮೂಲಕ ಮನುಷ್ಯನಿಗೆ ಸಿಗುವ ಪಾಠವು ಬೇರೆಲ್ಲೂ ದೊರಕಲು ಸಾಧ್ಯವಿಲ್ಲ.ಹೃದಯ, ಮನಸ್ಸು ಎರಡೂ ಬೆರೆತು ಒಪ್ಪಂದದ ಪ್ರಕಾರ ಪ್ರೀತಿಸಿ ಮದುವೆಯಾಗುವವರು ಬೆರಳೆಣಿಕೆಯಾದರೆ, ಹೃದಯದ ಮಾತು ಕೇಳೋದ ಅಥವಾ ಮನಸ್ಸಿನಂತೆ ಹೆಜ್ಜೆ ಹಾಕೋದ ಎಂದು ಗೊಂದಲದಲ್ಲಿ ಮುಂದೆ ಸಾಗುವವರು ಹಲವರು! ಮಕ್ಕಳಾಗಿಲ್ಲವೆಂದು ಸ್ವಂತ ಅಣ್ಣನ ಮಗನನ್ನು ಸ್ವಂತ ಮಗನಾಗಿಯೇ ಬೆಳೆಸಿದ್ದ ಕಮಲಾಕ್ಷಮ್ಮ, ತನಗೆ ಮಗಳು ಹುಟ್ಟಿದಾಗ ಅವರಿಬ್ಬರು ಮುಂದೆ ಸತಿ – ಪತಿ ಎನ್ನುತ್ತಾರೆ, ಅದನ್ನು ಪಾಲಿಸುತ್ತಾರೆ ಕೂಡ. ಮಹೇಶನಿಗಾಗಿದ್ದೂ ಕೂಡ ಅದೇ! ಹಿರಿಯರ ಅಣತಿಯಂತೆ ಉಮಾಳನ್ನೇ ವರಿಸಬೇಕಾಗಿದ್ದವನಿಗೆ, ನಗರದ ಬೆಡಗಿ ಸುಷ್ಮಾಳ ಪರಿಚಯವಾಗುತ್ತದೆ. ನಂತರ, ಪ್ರೀತಿ(?)ಯಾಗಿ ಪರಿವರ್ತನೆಗೊಂಡು ಮದುವೆಯಾಗುತ್ತಾರೆ! ಅವನ ಭಾವನೆಗಳಲ್ಲಿ ಉಚ್ಚ ಸ್ಥಾನದಲ್ಲಿದ್ದ ಉಮಾ ಹಳ್ಳಿಗುಗ್ಗು ತರಹ ಕಾಣಿಸ್ತಾಳೆ.. ಅದಿಕ್ಕೆ ಅಂದಿದ್ದು ಅವನದ್ದು ದುರ್ಬಲ ಹೃದಯವಲ್ಲದ್ದೆ ಮತ್ತಿನ್ನೇನು? ಅಥವಾ ಹೃದಯ ಮನಸ್ಸು ಯಾವುದಕ್ಕೆ ಹೆಚ್ಚು ಒತ್ತು ಕೊಡಲಾರದೆ, ಸೋತು ಹೋದನಾ? ಈ ಎಲ್ಲಾ ಪ್ರಶ್ನೆಗಳನ್ನು ಹುಟ್ಟುಹಾಕುತ್ತಲೇ ಈ ಕೃತಿಯೂ ಮುಂದೆ ಸಾಗುತ್ತದೆ.ಮಹೇಶ ಮಾಡಿದ ತಪ್ಪಿನಿಂದ ಭೀಕರ ಶಿಕ್ಷೆಗೊಳಪಟ್ಟಿದ್ದು ಉಮಾಳ ಕುಟುಂಬ! ಉಮಾ ದುರಂತ ನಾಯಕಿ!? ಮನೋಹರನ ಆಗಮನ ಸ್ವಲ್ಪ ಮಟ್ಟಿಗಾದರೂ ಅವಳಲ್ಲಿ ನೆಮ್ಮದಿ ತಂದರೂ, ಹೃದಯದಲ್ಲಿ ಪ್ರತಿಷ್ಠಾಪನೆಯಾಗಿದ್ದ ಮಹೇಶನ ಮೂರ್ತಿಯನ್ನು ಅಲುಗಾಡಿಸಲು ಸಾಧ್ಯವಾಯಿತೇ ಅವಳಿಗೆ? ಉಮಾ ಯಾರ ಮಂದಾರ ಕುಸುಮ?ಹೀಗೆ ಹಲವು ಗೊಂದಲ ,ಪ್ರಶ್ನೆಗಳೊಂದಿಗೆ , ಚರ್ಚಿಸುತ್ತಾ ಈ ಕೃತಿಯೂ ಮುಂದೆ ಸಾಗುತ್ತದೆ.
©2024 Book Brahma Private Limited.