‘ಮಾಹೆ ನದಿಯ ದಡದಲ್ಲಿ’ ಎಂ. ಮುಕುಂದನ್ ಅವರ ಮಲಯಾಲಂನ ಮೂಲ ಕೃತಿಯಾಗಿದ್ದು, ಕೆ.ಕೆ ನಾಯರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ನೂರು ವರ್ಷಗಳನ್ನು ದಾಟಿರುವ ಮಲಯಾಳ ಕಾದಂಬರಿ ಚರಿತ್ರೆಯನ್ನು ಮೂರು ಘಟ್ಟಗಳಾಗಿ ವಿಂಗಡಿಸಿ ಚರ್ಚಿಸುವುದರಿಂದ ಈ ಸಾಹಿತ್ಯ ಶಾಖೆಯ ಅಧ್ಯಯನಕ್ಕೆ ಸಹಾಯಕವಾಗುವುದೆಂದು ಹೇಳುವಾಗ, ಅವುಗಳಲ್ಲೇ ಕೆಲವು ಉಪ ಘಟ್ಟಗಳನ್ನು ಕೂಡ ಗುರುತಿಸಲು ಸಾಧ್ಯವೆಂದೂ ಮನಗಾಣಬೇಕಾಗಿದೆ. ಅಗ್ರಗಾಮಿಗಳು ಎಂಬ ನೆಲೆಯಲ್ಲಿ ಸಾಮಾಜಿಕ ಕಾದಂಬರಿ ಕ್ಷೇತ್ರದಲ್ಲಿ ಚಂದು ಮನನ್ನ್ನರೂ ಐತಿಹಾಸಿಕ ಕಾದಂಬರಿ ಕ್ಷೇತ್ರದಲ್ಲಿ ಸಿ.ವಿ. ರಾಮನ್ ಪಿಳ್ಳೆಯವರೂ ಹೊಂದಿರುವ ಸ್ಥಾನ ಉನ್ನತವಾದುದು. ಅವರಿಬ್ಬರೂ ಕಡಿದು ನಿರ್ಮಿಸಿದ ಮಾರ್ಗದಲ್ಲಿ ಹಲವು ಮಂದಿ ಕಾದಂಬರಿಕಾರರು ಅವರ ಬಳಿಕ ಕಾಲು ಶತಮಾನದಷ್ಟು ಕಾಲ ಕಳೆದರೂ ಸಾಮಾನ್ಯ ಮಟ್ಟವನ್ನು ಮೀರಿ ಎತ್ತರಕ್ಕೇರಿ ನಿಲ್ಲಬಲ್ಲ ಕೃತಿಗಳು ಮೂರೋ ನಾಲ್ಕೂ ಮಾತ್ರವೇ ಆ ಅವಧಿಯಲ್ಲಿ ರಚಿತವಾದದ್ದು ಎಂಬುದಂತೂ ನಿಜ. ಎರಡನೆ ಘಟ್ಟ, ಆರಂಭವಾದದ್ದು ಕೇಶವದೇವ್ ಮತ್ತು ತಕಜಿ ಸಣ್ಣಕತೆಗಳಿಂದ ದೂರ ಸರಿದು ದೊಡ್ಡ ಕ್ಯಾನ್ವಾಸ್ ಹೊಂದಿರುವ ಕತೆಗಳನ್ನು ಕೈಗೆತ್ತಿಕೊಂಡಾಗ, ರೊಮ್ಯಾಂಟಿಕ್ನ ಒಳಪ್ರವಾಹವನ್ನು ತ್ಯಜಿಸದೆಯೇ ರಿಯಲಿಸಂನ ಮೂಲಕ ಸಾಮಾನ್ಯ ಜನರ ಜೀವನವನ್ನೂ ಸಮಸ್ಯೆಗಳನ್ನೂ ಸವಾಲಿನಂತೆ ಗಾಂಭೀರ್ಯದೊಂದಿಗೆ ಸಾದರಪಡಿಸುವ ಚಳುವಳಿಗೆ ಇವರು ಹೆಚ್ಚಿನ ಚಾಲನೆ ನೀಡಿದ್ದರು. ಈ ಅವಧಿಯಲ್ಲಿ ಮಲಯಾಳ ಕಾದಂಬರಿ ಸಂಖ್ಯೆಯಲ್ಲೂ ವೈವಿಧ್ಯದಲ್ಲೂ ಬಹಳಷ್ಟು ಅಭಿವೃದ್ಧಿ ಹೊಂದಿದೆ. ಅರವತ್ತನೇ ದಶಕದಲ್ಲಿ ಆರಂಭಗೊಂಡ ಮೂರನೆ ಘಟ್ಟ ಆಧುನಿಕತೆಯ ಪ್ರವೇಶವನ್ನು ಸ್ಪಷ್ಟವಾಗಿ ಗುರುತಿಸುವ ಒಂದು ತಿರುವಾಗಿರುತ್ತದೆ.
©2024 Book Brahma Private Limited.