ಟಿ.ಎನ್. ವಾಸುದೇವ ಮೂರ್ತಿ ಅವರ ಅನುವಾದಿತ ಕೃತಿ ಖಲೀಲ್ ಗಿಬ್ರಾನ್. ಕೃತಿಯಲ್ಲಿ ಕಥೆಗಾರರು ಹಾಗೂ ಪ್ರಕಾಶಕರು ಕೇಶವ ಮಳಗಿ ಅವರ ಮುನ್ನುಡಿಯ ಮಾತುಗಳಿವೆ. ಅವರು ಹೇಳುವಂತೆ, ತಾನು ಕಂಡಂತೆ ಖಲೀಲ್ ಗಿಬ್ರಾನ್ನ ಬದುಕನ್ನು ಧ್ಯಾನಿಸಿ ಬರೆದ ಈ ಕೃತಿಯ ರಚನೆಯು ಅತ್ಯಂತ ಆಧುನಿಕ ವಿನ್ಯಾಸವನ್ನು ಹೊಂದಿರುವುದರಿಂದಲೇ ಕನ್ನಡದ ಓದುಗರಿಗೆ ಪ್ರಿಯವಾಗುವುದೆಂದು ನಂಬಿದ್ದೇನೆ. ಭಾರತೀಯ ಮತ್ತು ಕನ್ನಡದ ಅತ್ಯುತ್ತಮ ಆಧುನಿಕ ಕಾದಂಬರಿಗಳನ್ನು ಓದಿದಾಗ ದೊರಕುವ ಅನುಭೂತಿಯನ್ನು ಈ ಪುಸ್ತಕ ನೀಡುತ್ತದೆ. ರವೀಂದ್ರನಾಥ ಠಾಕೂರರ 'ಗೋರಾ', 'ಮಹಾಯಾತ್ರಿಕ' (ಪಥೇರ್ ಪಾಂಚಾಲಿ), ಹಿಂದಿ ಭಾಷೆಯ ಶ್ರೇಷ್ಠ ಗದ್ಯ ಲೇಖಕ ನಿರ್ಮಲ್ ವರ್ಮಾರ ಕೃತಿಗಳು, ಕನ್ನಡದ ಶಾಂತಿನಾಥದೇಸಾಯಿಯವರ ಕಾದಂಬರಿಗಳು, ಅನಂತಮೂರ್ತಿಯವರ ಸಂಕೀರ್ಣ ಕಥೆಗಳನ್ನು ಓದಿದಾಗ ಒದಗುವ ಬಿಡುಗಡೆಯನ್ನು ಈ ಅನುವಾದವು ನೀಡುತ್ತದೆ. ಓದುವಾಗ ನಾನು ಅಂಥ ಮುಕ್ತಿಯನ್ನೇ ಪಡೆದೆ. ಪ್ರಸ್ತುತ ಕೃತಿಯಲ್ಲಿಯೂ ಮೂಲದ ಭಾವಗೀತಾತ್ಮಕತೆ, ರೂಪಕ ಭಾಷೆ, ಅನುಕಂಪವೇ ಪ್ರಧಾನವಾದ ನಿರೂಪಣಾ ಶೈಲಿ ಮತ್ತು ಅತ್ಯಂತ ಸಾವಧಾನದ ಗದ್ಯವಿಧಾನಕ್ಕೆ ಒಂದಿನಿತೂ ಚ್ಯುತಿ ಬರದ ಹಾಗೆ ಮೂರ್ತಿ ಕನ್ನಡಿಸಿದ್ದಾರೆ. ಅನುವಾದದ ಚೆಲುವು ಓದುವಾಗ ಮಂತ್ರಮುಗ್ಧವಾಗಿಸುತ್ತದೆ. ಮೂರ್ತಿಯವರ ಸದ್ಯದ ಕೃತಿಗೆ ಮತ್ತು ಹಿಂದಿನ ಪುಸ್ತಕಗಳಿಗೆ ಕನ್ನಡಿಗರು ಅವರಿಗೆ ಕೃತಜ್ಞರಾಗಿರಬೇಕಿದೆ. ಅವರ ಪುಸ್ತಕಗಳು ಅನುವಾದದಲ್ಲಿ ಹೊಸ ಆಧ್ಯಾತ್ಮಿಕ ನುಡಿಗಟ್ಟುಗಳನ್ನು ಹುಟ್ಟು ಹಾಕುವಷ್ಟ ಶಕ್ತಿಶಾಲಿಯಾಗಿವೆ ಎಂಬುದಾಗಿ ಹೇಳಿದ್ದಾರೆ.
©2024 Book Brahma Private Limited.