ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ತನ್ನ ಅಂತರ ಭಾರತೀಯ ಪುಸ್ತಕ ಮಾಲೆಯಡಿ ವೆಂಕಟೇಶ ಮಾಡಗೂಳಕರ್ ಅವರು ಮರಾಠಿಯಲ್ಲಿ ಬರೆದ ‘ಬನಗರವಾಡಿ‘ ಕಾದಂಬರಿಯನ್ನು ಭಾಸ್ಕರ ಗೋವಿಂದ ಗೋಖಲೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾದಂಬರಿಯು 1971ರಲ್ಲಿ ಮೊದಲ ಮುದ್ರಣ ಕಂಡಿತ್ತು.
1958ರಲ್ಲಿ ಮೊದಲ ಬಾರಿಗೆ The village has no walls ಎಂಬ ಶೀರ್ಷಿಕೆಯಡಿ ಆಂಗ್ಲ ಭಾಷೆಗೆ ತರ್ಜುಮೆಗೊಂಡಾಗ ಈ ಕಾದಂಬರಿಯು ಅಂತಾರಾಷ್ಟ್ರೀಯವಾಗಿ ಬಹು ಚರ್ಚಿತ ಕೃತಿಯಾಯಿತು. ನಂತರ ಡೇನಿಷ್ ಭಾಷೆಗೂ ಅನುವಾದಗೊಂಡಿತು. ಗ್ರಾಮೀಣ ಜೀವನದ ಆದರ್ಶಗಳನ್ನು ಸರಳವಾಗಿ ನಿರೂಪಿಸಿದ್ದೇ ಈ ಕೃತಿಯ ಆಕರ್ಷಣೆ ಮಾತ್ರವಲ್ಲ; ನಗರವಾಸಿಗಳನ್ನು ಹಳ್ಳಿಯತ್ತ ಗಮನ ಸೆಳೆಯುವುದು ಈ ಕೃತಿಯ ಮತ್ತೊಂದು ಅಂಶ. ಇಲ್ಲಿಯ ಯಾವುದೇ ಪಾತ್ರವು ಹಳ್ಳಿಯ ಮುಖವಾಡ ಹೊತ್ತ ನಗರವಾಸಿಗಳದ್ದಲ್ಲ. ಅವು ಪಕ್ಕಾ ಗ್ರಾಮೀಣ ಸತ್ವವೇ ಆಗಿವೆ. ತಮ್ಮ ಕಷ್ಟ-ಸಂಕಷ್ಟಗಳಲ್ಲೇ ಜೀವನ ನೆಮ್ಮದಿ ಕಾಣುವ ಮನುಷ್ಯರು ಅವರು. ಗ್ರಾಮೀಣ ಭಾಷೆ-ಸಂಸ್ಕೃತಿಯನ್ನು ಸನ್ನಿವೇಶಕ್ಕೆ ತಕ್ಕಂತೆ ಬಳಸಿದ್ದರಿಂದ ಇವುಗಳ ಸೊಗಡು ಮತ್ತಷ್ಟು ಹೆಚ್ಚಿದೆ.
ಬ್ರಾಹ್ಮಣ ಯುವಕನೊಬ್ಬ ಬನಗರವಾಡಿ ಹಳ್ಳಿಯ ಶಾಲೆ ಶಿಕ್ಷಕ. ಇಲ್ಲಿಯವರು ಬಹುತೇಕರು ಕುರುಬರು. ತಮ್ಮ ಮಕ್ಕಳನ್ನು ಕುರಿ ಕಾಯಲು ಕರೆದೊಯ್ಯುವವರು. ಅಂತಹವರನ್ನು ಮನವೊಲಿಸಿ ಶಿಕ್ಷಣದ ಮಹತ್ವ ಹಾಗೂ ಸರ್ಕಾರದ ಯೋಜನೆಗಳ ಮಹತ್ಯ ಮತ್ತು ಪ್ರಯೋಜನ ಪಡೆಯುವ ಅಗತ್ಯವನ್ನು ಪ್ರತಿಪಾದಿಸಿ, ಆತ ಬರೀ ಶಿಕ್ಷಕನಾಗದೇ ಜನರಲ್ಲಿ ಅರಿವು ಮೂಡಿಸುವ ಪ್ರಬಲ ನಾಯಕನಾಗುತ್ತಾನೆ. ಹಳ್ಳಿಯ ಕೊಳಚೆ ಪ್ರದೇಶಗಳನ್ನು ಈ ಶಿಕ್ಷಕನ ಮೂಲಕವೇ ಪರಿಚಯಿಸುವ ತಂತ್ರವಿದೆ. ಆದರೆ, ಅದು ಕುರುಬರ ಸಂಸ್ಕೃತಿಯ ಔನ್ನತ್ಯವನ್ನೂ ವಿವರಿಸುತ್ತದೆ. ಇವರಿಗೆ ಸ್ವಲ್ಪ ಅರಿವು ಮೂಡಿಸಿದರೆ ನಮ್ಮ ಹಳ್ಳಿಯ ಅಭಿವೃದ್ಧಿಗೆ ನಮ್ಮದೇ ಹಳ್ಳಿಗರ ಸಂಸ್ಕೃತಿಯೇ ಸಾಕು ಎಂಬ ಎಚ್ಚರಿಕೆ ಹಾಗೂ ಸಲಹೆ ನೀಡುವ ಕೃತಿ ಇದಾಗಿದೆ.
©2024 Book Brahma Private Limited.