ಚಿತ್ರಾಮುದ್ಗಲ ಹಿಂದಿಯಲ್ಲಿ ಬರೆದಿರುವ 'ಅವಂ' ಕಾದಂಬರಿಯ ಕನ್ನಡಾನುವಾದವೇ ಈ ’ಆವಿಗೆ’. ಆರ್. ಪಿ. ಹೆಗಡೆ ಈ ಬೃಹತ್ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ.
ಆವಿಗೆ ಅಥವಾ ಅವಂ ಎಂದರೆ ಮಣ್ಣಿನ ಮಡಿಕೆಗಳನ್ನು ಸುಡುವ ಬಟ್ಟೆ. ನೆಲದಲ್ಲಿ ಹೊಂಡ ತೆಗೆದು ಕಟ್ಟಿಗೆಗಳನ್ನು ಒಟ್ಟಿಗೆ ಜೋಡಿಸಿ, ಹಸಿ ಮಣ್ಣಿನ ಗಡಿಗೆಗಳನ್ನು, ಮಡಿಕೆಗಳನ್ನು ಇಟ್ಟು ಬೆಂಕಿ ಹಾಕಿದಾಗ ಸುಟ್ಟು ಪಕ್ವವಾಗುವ ಕ್ರಿಯೆಯನ್ನು ರೂಪಕವಾಗಿ ಆವಿಗೆ ಕಾದಂಬರಿ ಹೊಂದಿದೆ.
ಕನ್ನಡದಲ್ಲಿ ಬೃಹತ್ ನಗರಗಳ ಕಾರ್ಮಿಕರ ಬದುಕಿನ ಸಮಸ್ಯೆಗಳನ್ನು ಹೊಂದಿದ ಕಾದಂಬರಿಗಳ ಸಾಲಿಗೆ ಈ ಕೃತಿಯೂ ಸಲ್ಲುತ್ತದೆ ಎನ್ನಬಹುದು. ಒಟ್ಟಂದದಲ್ಲಿ ಕಾರ್ಮಿಕ ಸಂಘಟನೆಗಳ ಒಳ ರಾಜಕೀಯಗಳನ್ನು ಹೇಳುವ ಪ್ರಯತ್ನ ಮಾಡುತ್ತಾ ಆವಿಗೆ ಮಹಿಳಾ ಕಾರ್ಮಿಕರ ಹೋರಾಟವನ್ನು ಕೇಂದ್ರವಾಗಿರಿಸಿಕೊಳ್ಳುವ ಮೂಲಕ ಈ ಕಾದಂಬರಿಯ ವಸ್ತು ಪ್ರಮುಖವಾಗುತ್ತದೆ. ಕಾರ್ಮಿಕ ಕುಟುಂಬಗಳ ಜೊತೆಗಿನ ತಮ್ಮ ಸುದೀರ್ಘ ಸಂಬಂಧದ ಬಲದಿಂದ ಲೇಖಕಿಗೆ ಈ ಕಾದಂಬರಿ ಬರೆಯಲು ಸಾಧ್ಯವಾಗಿದೆ. ಕಾರ್ಮಿಕ ಸಂಘಟನೆಗಳ ದಾಖಲೀಕರಣದ ಸಂದರ್ಭದಲ್ಲಿ ಮಹಿಳೆ ಹೇಗೆ ಪರಿಧಿಯಿಂದಾಚೆಗೆ ಉಳಿಯುತ್ತಾಳೆ ಎಂಬುದರ ಈ ಬಗ್ಗೆ ಧ್ವನಿಯೆತ್ತುವ ಕಾದಂಬರಿಯಾಗಿದೆ.
©2024 Book Brahma Private Limited.