ಎಚ್. ವೈ. ಶಾರದಾ ಪ್ರಸಾದ್ ಮೂಲತಃ ಬೆಂಗಳೂರಿನವರು. ಪೂರ್ಣ ಹೆಸರು ಹೊಳೆನರಸೀಪುರ ಯೋಗಾನರಸಿಂಹ ಶಾರದಾ ಪ್ರಸಾದ್. ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ, ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿಯವರಿಗೆ ಮಾಧ್ಯಮ ಸಲಹೆಗಾರರಾಗಿ, ಸೈ ಎನಿಸಿಕೊಂಡಿದ್ದ ಮೇಧಾವಿ, ಸಮರ್ಥ ಕನ್ನಡಿಗರು. ತಂದೆ ಎಚ್. ಯೋಗನರಸಿಂಹ ಅಧ್ಯಾಪಕರಾಗಿದ್ದರು ಜೊತೆಗೆ, ಸಂಗೀತ ಹಾಗೂ ಸಂಸ್ಕೃತದಲ್ಲಿ ವಿದ್ವಾಂಸರು. ಶಾರದಾ ಪ್ರಸಾದ್ ಅವರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವೆಲ್ಲಾ ಮೈಸೂರುನಗರದಲ್ಲಿ ಪೂರ್ಣಗೊಳಿಸಿದರುಖ್ಯಾತ ಕವಿ ಗೋಪಾಲಕೃಷ್ಣ ಅಡಿಗ, ಸಾಹಿತಿ-ಶಿಕ್ಷಣತಜ್ಞ ಪ್ರೊ.ಸಿ.ಡಿ. ನರಸಿಂಹಯ್ಯ, ಲಲಿತ ಪ್ರಬಂಧಕಾರ ಎ.ಎನ್. ಮೂರ್ತಿರಾವ್ ಹಾಗೂ ಕವಿ ಎ.ಕೆ. ರಾಮಾನುಜನ್ ಮುಂತಾದವರು ಶಾರದಾ ಪ್ರಸಾದ್ ಅವರ ಸಹಪಾಠಿಗಳು.
ಸಾಹಿತ್ಯಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿರುವ ಶಾರದಾ ಪ್ರಸಾದ್ ಅವರು ಜವಾಹರಲಾಲ್ ಅವರ ಆಯ್ದ ಬರಹಗಳು, ಮೊಮ್ಮಕ್ಕಳು ಹೇಳಿದ ಅಜ್ಜಿ-ಕಥೆ, ಸಂಗೀತದ ಸಿರಿ ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಅನುವಾದ ಕ್ಷೇತ್ರದಲ್ಲಿ ಕೃಷಿಮಾಡಿದ್ದಾರೆ. ಅವರ ಬದುಕು-ಸಾಹಿತ್ಯ-ಸಾಧನೆಗಾಗಿ ಭಾರತ ಸರ್ಕಾದ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ, ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ, ಇಂದಿರಾಗಾಂಧಿ ರಾಷ್ಟ್ರೀಯ ಭಾವೈಕ್ಯತಾ ಪುರಸ್ಕಾರವೂ ಲಭಿಸಿದೆ. ರಾಜಕೀಯ, ಸಾಹಿತ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೃಷಿ ಮಾಡಿದ ಶಾರದಾ ಪ್ರಸಾದರು 2008 ರ ಸೆಪ್ಟೆಂಬರ್ 2 ರಂದು ತಮ್ಮ 84 ವರ್ಷ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿದರು.