ಕನ್ನಡದ ಯುವ ಸಂಶೋಧಕ, ಅನುವಾದಕ ಟಿ.ಡಿ. ರಾಜಣ್ಣ ತಗ್ಗಿ ಅವರು ಮೂಲತಃ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ತಗ್ಗಿಹಳ್ಳಿಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ, ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಗಳನ್ನು ಪಡೆದಿರುವ ಅವರು ಮದರಾಸು ವಿಶ್ವವಿದ್ಯಾಲಯ ಹಾಗೂ ಜೈನ್ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮೌಲಿಕ ಪ್ರಬಂಧಗಳನ್ನು ಮಂಡಿಸಿರುವ ರಾಜಣ್ಣ ತಗ್ಗಿ ಅವರು ಮದರಾಸು , ಬೆಂಗಳೂರು ಮತ್ತು ಗುಲಬರ್ಗಾ ಆಕಾಶವಾಣಿ ಕೇಂದ್ರಗಳಲ್ಲಿಯೂ ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಭಾಷೆ ಬಲ್ಲವರಾಗಿದ್ದು, ಆ ಭಾಷೆಗಳಿಂದ ‘ಮಳೆಗಾಲದ ಒಂದು ರಾತ್ರಿಯಲ್ಲಿ’(2006), ‘ರಾಸಾನಿ ಕಥೆಗಳು’ ಮತ್ತು ‘ಜೋಗತಿ’(2008), ‘ಯಾಜ್ಞಸೇನಿ ಆತ್ಮಕಥೆ’(2008), ‘ಬಣ್ಣದ ಬದುಕು ಮತ್ತು ಹೋರಾಟದ ಬದುಕು’(2010), ‘ಕಾಮಕೂಪ’(2012), ‘ಮೈ ಫಾದರ್ ಬಾಲಯ್ಯ’ ಮತ್ತು ‘ಯಾತ್ರಿಕನ ಕನಸು’(2014) , ‘ಅಲೆಮಾರಿಯೊಬ್ಬನ ಆತ್ಮಕತೆ’(2015), ‘ಪಾತಾಳಕ್ಕೆ ಪಯಣ’ ಮತ್ತು ‘ದಾಹ’ (2016), ಅಜೇಯ-ದಿ ಕೌಂಟ್ ಆಫ್ ಮಾಂಟೆ ಕ್ರಿಸ್ಟೋ (2016), ಎಲ್ಲಿಯೂ ನಿಲ್ಲದಿರು, ಅಷ್ಟಾವಕ್ರನೂ ಅಪೂರ್ವ ಸುಂದರಿಯೂ (2020) ಕೃತಿಗಳನ್ನು ಪ್ರಕಟಿಸಿದ್ದಾರೆ.
ಜೊತೆಗೆ ‘ನೆನಪುಗಳ ಕಣಜ’(ಕವನ ಸಂಕಲನ), ‘ನವನೀತ’. ‘ಅಮೂರ್ತ ಕನ್ನಡಿ’, ಮತ್ತು ‘ಅನೇಕ’, ‘ಕನ್ನಡ ಶಾಸನ ಮತ್ತು ಸಾಹಿತ್ಯದಲ್ಲಿ ಶಾಪ’ ಹಾಗೂ ‘ಗುಲಬರ್ಗಾ ಕನ್ನಡ ಪದಕೋಶ’ ಸಂಶೋಧನ ಕೃತಿಗಳನ್ನು ರಚಿಸಿದ್ದಾರೆ.
ಅವರ ಕಾಮಕೂಪ(ಅನುವಾದ) ಕಾದಂಬರಿಗೆ ಪ್ರೊ.ತೇಜಸ್ವಿ ಕಟ್ಟೀಮನಿ ಸಾಹಿತ್ಯ ಪುರಸ್ಕಾರ ಲಭಿಸಿದೆ. ‘ದಾಹ’ ಕಾದಂಬರಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ಲಭಿಸಿದೆ.
ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಸೇವೆಸಲ್ಲಿಸುತ್ತಿದ್ದಾರೆ.