‘ಸ್ತ್ರೀಎಂದರೆ ಅಷ್ಟೇ ಸಾಕೆ’ ಲೇಖಕಿ, ಕವಿ, ಡಾ. ಎಚ್.ಎಲ್.ಪುಷ್ಪ ಅವರ ವಿಚಾರ, ವಿಮರ್ಶಾ ಲೇಖನಗಳ ಸಂಕಲನ. ದನಗಳಿಗೆ ಜಡ್ಡಾದಾಗ, ನಿವಾರಣೆಗೆ ಕುಂದು ಕೇರುವ ಸಂಪ್ರದಾಯವೊಂದು ಹಳ್ಳಿಗಳಲ್ಲಿದೆ. ದನದ ಎರಡೂ ಬದಿಗೆ ಇಬ್ಬರು ಹೆಂಗಸರು ಎರಡು ಮೊರ ಹಿಡಿದು ನಿಂತು, ಅದರೊಳಗೊಂದಷ್ಟು ಬೂದಿ, ಒಂದಿಷ್ಟು ಧಾನ್ಯ ಹಾಕಿ “ಅಂದ್‌ವಾಗ್ ಚಂದ್ವಾಗ್ ಮಂದ್‌ಗೋರ್ ಮನಿಗ್ ಬಾ' ಎಂದು ಮೂರು ಸಾರಿ ಹೇಳುತ್ತಾ ಮೂರು ಸಾರಿ ಕೇರಿ, ಮೂರು ಸಾರಿ ಮೊರ ಬದಲಿಸಿಕೊಳ್ಳುತ್ತಾರೆ. ಈ ದನಕ್ಕೆ ಜಡ್ಡು ಬಿಟ್ಟಿತೋ ಇಲ್ಲವೋ ಗೊತ್ತಿಲ್ಲ. ಆದರೆ ಮುಂದಿನ ದನಕ್ಕೆ ಜಡ್ಡಾದಾಗ ಈ ಕುಂದು ಕೇರುವ ಸಂಪ್ರದಾಯ ಮಾತ್ರ ನಿಂತಿಲ್ಲ. ಸ್ತ್ರೀ ಸಂವೇದನೆ, ಚಿಂತನೆ, ಸಾಹಿತ್ಯದ ಮೇಲಿನ ಚರ್ಚೆ, ವಿಮರ್ಶೆ ಗಳು ಮದ್ದು ಹುಡುಕುವುದಕ್ಕಿಂತ ಹೆಚ್ಚು ಕುಂದು ಕೇರುವುದರಲ್ಲೇ ನಿರತವಾಗಿವೆ. ಆದರೆ ಎಚ್ ಎಲ್ ಪಪ್ಪ ಅವರಿಗೆ ಕುಂದು ಕೇರುವುದರಿಂದ ಜಾಡ್ಯ ಹರಿಯುವುದಿಲ್ಲ ಎಂದು ಖಚಿತವಾಗಿ ತಿಳಿದಂತಿದೆ.
ಹಾಗಾಗಿ ಸ್ತ್ರೀ ಎಂದರೆ ಅಷ್ಟೇ ಸಾಕೆ ಓದುವಾಗ ಈವರೆಗಿನ ಉಸಿರು ಬಿಗಿತದಿಂದ ಬಿಡುಗಡೆಗೊಂಡ ಅನುಭವ ವಾಗುತ್ತದೆ. ಬೆಡಗಿನ ವಚನಕಾರ್ತಿಯರಿಂದ ಮೊದಲ್ಗೊಂಡು ಬಿ ಟಿ ಜಾಹ್ನವಿ ಯವರೆಗೆ, ಕಾರಂತರ ಮೈಮನಗಳ ಕಡಲ ಸುಳಿಯಿಂದ ಹಿಡಿದು ಮಹದೇವರ ದೇವನೂರಿನ ಸ್ತ್ರೀ ಬಯಲಿನವರೆಗೆ ಕನ್ನಡ ಸಾಹಿತ್ಯ ಶರಧಿಯ ಹಿರಿ-ಕಿರಿಯ ಬಂದರುಗಳಲ್ಲೆಲ್ಲಾ ಲಿಂಗಭೇದವಿಲ್ಲದೆ ಲಂಗರು ಹಾಕಿ ಈವರೆಗೂ ಅವರಿವರು ಕಾಣದ್ದನ್ನು ಕಣ್ಣಿಗೆ ತುಂಬಿಕೊಂಡು ಯಾವ ಯಗಟು-ಒಗಟುಗಳಿಲ್ಲದೆ ಮಾಡಿದ ಪಕ್ಕಾ ಸೀದಾಸಾದ ಸಿರಿವಂತ ಮಂಡನೆ ಇಲ್ಲಿದೆ. | ದಟ್ಟ ಓದು, ಪಕ್ಷಿನೋಟ, ಪಕ್ಷಪಾತ, ವಕೀಲಿಕೆಗಳಿಲ್ಲದ ಇಲ್ಲಿಯ ದಿಟ್ಟ ಬರಹಗಳು ಅನನ್ಯ ಒಳನೋಟದಿಂದಾಗಿ ಓದುಗರನ್ನು ತಟ್ಟುತ್ತವೆ.
ಕವಯತ್ರಿ, ಸ್ತ್ರೀವಾದಿ ಎಚ್.ಎಲ್. ಪುಷ್ಪ ಅವರು ದೊಡ್ಡಬಳ್ಳಾಪುರದ ಹೊಸಹಳ್ಳೀ ಉಜ್ಜನಿಯಲ್ಲಿ 1962 ಸೆಪ್ಟಂಬರ್ 18ರಂದು ಜನಿಸಿದರು. ತಾಯಿ ಕಮಲಮ್ಮ, ತಂದೆ ಲಕ್ಷ್ಮಣಗೌಡ. ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕವನ ರಚನೆಯಲ್ಲಿ ಅತೀವ ಆಸಕ್ತಿ ಇರುವ ಇವರು ಅಮೃತಮತಿ ಸ್ವಗತ ಕೃತಿಯ ಮೂಲಕ ಕಾವ್ಯ ಕ್ಷೇತ್ರ ಪ್ರವೇಶಿಸಿದರು. ಪುಷ್ಪ ಅವರ ಪ್ರಮುಖ ಕೃತಿಗಳೆಂದರೆ ಅಮೃತಮತಿಯ ಸ್ವಗತ, ಗಾಜುಗೊಳ, ಮದರಂಗಿ, ವೃತ್ತಾಂತ, ಲೋಹದ ಕಣ್ಣು (ಕವನ ಸಂಕಲನ), ಭೂಮಿಲ್ಲ ಇವಳು, ಗೆಲ್ಲಲಾರ್ಕುಮೆ ಮೃತ್ಯುರಾಜನಂ, ಪರ್ವಾಪರ್ವ (ನಾಟಕ), ಅವಲೋಕನ, ಗಂಧಗಾಳಿ, ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ ...
READ MOREಸಾಹಿತ್ಯ ವಿಮರ್ಶೆ-2015