'ಬೇಂದ್ರೆ ರಾಷ್ಟ್ರೀಯ ಟ್ರಸ್ಟ್' ಆರಂಭಿಸಿದ ಗ್ರಂಥಮಾಲೆಯ ಈ ಮೊದಲನೆಯ ಕೃತಿ. ಕವಿ 'ಅಂಬಿಕಾತನಯದತ್ತ'ರು ಯಾವೊತ್ತೂ ಓದುಗನನ್ನು 'ಬಾ ಹತ್ತರಕೇ, ಪ್ರಶೋತ್ತರಕೆ, ನಿನ್ನುತ್ತರಕೆ, ನಿನ್ನೆತ್ತರಕೆ, ನನ್ನೆತ್ತರಕೆ' ಎಂದು ಕರೆಕೊಟ್ಟು, ಕವಿತೆಗಳನ್ನು ಕೇಳಿಸಿದವರು. ಎಂಬತ್ತೈದು ವರ್ಷಗಳಿಂದ ಸಹೃದಯರು ಅಂಬಿಕಾತನಯದತ್ತರ ಕವಿತೆಗಳನ್ನೋದುತ್ತ, ಹಾಡುತ್ತ ಅವರು ನಿರ್ಮಿಸಿದ ಕಾವ್ಯಜಗತ್ತನ್ನು ಹೊಕ್ಕು ಅಲೆದಾಡಿ 'ಅಪೂರ್ವ ಧ್ವನಿಗ್ರಹಣ ಮಾಡಿ, ತಮ್ಮ ಸಂಸ್ಕಾರ ಸಂಪನ್ನತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. “ಕವನವು ಕೇವಲ ಕಲೆಯಲ್ಲ; ಅದು ಸೃಷ್ಟಿಕರ್ಮದ ಆವಿರ್ಭಾವ, ಕೇವಲ ಭಾವ ಬುದ್ದಿಗಳಿಂದ ನಿರ್ವಾಹವನ್ನು ಮಾಡದೆ, ವಿಮರ್ಶಕನಾದವನು ಪ್ರಜ್ಞೆ ಪ್ರತಿಭೆಗಳಿಂದ ದೃಷ್ಟಿಕೋನವನ್ನು ಹಿಗ್ಗಿಸಬಲ್ಲ' ಎಂಬ ದ.ರಾ.ಬೇಂದ್ರೆಯವರ ಆಶಯವನ್ನು ನಿಜಗೊಳಿಸುವ ದಿಶೆಯಲ್ಲಿ ಇಂದಿನ ಕಾವ್ಯಪ್ರೇಮಿಗಳೂ ಕಾವ್ಯಾಭ್ಯಾಸಿಗಳೂ ಬೇರೆ ಬೇರೆ ನಿಟ್ಟಿನಿಂದ ಮತ್ತು ನಿಲುವಿನಿಂದ ಬೇಂದ್ರೆಯವರ ಅನುಸಂಧಾನ ಮಾತಾಡುತ್ತಿದ್ದಾರೆ. ಬೇಂದ್ರೆ ಕಾವ್ಯೋಪಾಸಕರು ’ಬೇಂದ್ರೆಭವನ'ದಲ್ಲಿ ಮಾಡಿದ ಹದಿನಾಲ್ಕು ಉಪನ್ಯಾಸಗಳು ಇಲ್ಲಿ ಸಂಕಲನಗೊಂಡಿವೆ.