ಒಬ್ಬ ಕತೆಗಾರನ ಒಟ್ಟು ಕತೆಗಳನ್ನು ಓದಿ, ಅಧ್ಯಯನ ಮಾಡಿ ಅವುಗಳ ಕುರಿತಂತೆ ವಿಮರ್ಶಾ ಲೇಖನಗಳನ್ನು ಪ್ರಕಟಿಸುವುದು ಸಣ್ಣ ವಿಷಯವಲ್ಲ. ಬಸವರಾಜು ಕುಕ್ಕರ ಹಳ್ಳಿ ಕಥಾಲೋಕ-ವಿಮರ್ಶಾ ಲೇಖನಗಳ ಸಂಕಲನ' ಈ ಕಾರಣಕ್ಕಾಗಿ ಇಂದು ಮುಖ್ಯವಾಗುತ್ತದೆ. ಬಸವರಾಜು ಕುಕ್ಕರಹಳ್ಳಿ ಅವರ ಕಥಾಲೋಕದ ಕುರಿತಂತೆ ಈ ಕೃತಿಯಲ್ಲಿ ಒಟ್ಟು 29 ಬರಹಗಳಿವೆ. ಡಾ. ನೀಲಗಿರಿ ತಳವಾರ ಮತ್ತು ಡಾ. ಯೋಗೇಶ ಎನ್. ಇವರು ಜಂಟಿಯಾಗಿ ಈ ಕೃತಿಯನ್ನು ಸಂಪಾದಿಸಿದ್ದಾರೆ. ಕೇಶವ ಮಳಗಿ, ಆರ್. ವಿಜಯರಾಘವನ್, ಡಾ. ಕವಿತಾ ರೈ, ಪ್ರೊ. ಓ. ಎಲ್. ನಾಗಭೂಷಣ ಸ್ವಾಮಿ, ಡಾ. ಸಬಿತಾ ಬನ್ನಾಡಿ, ಡಾ. ವಿಜಯ ಕುಮಾರಿ ಎಸ್. ಕರಿಕಲ್, ಡಾ. ಪ್ರಹ್ಲಾದ ಅಗಸನಕಟ್ಟೆ, ಡಾ. ನಟರಾಜ ಬೂದಾಳು, ವಿ. ಎನ್. ವೆಂಕಟಲಕ್ಷ್ಮೀ, ಡಾ. ಭಾರತೀ ದೇವಿ, ಶಾಂತಿನಾಥ ದೇಸಾಯಿ, ಜಯಂತ ಕಾಯ್ಕಿಣಿ ಮೊದಲಾದ ಖ್ಯಾತ ಬರಹಗಾರರು ಇಲ್ಲಿ ಬರೆದಿದ್ದಾರೆ. 'ಕುಕ್ಕರಹಳ್ಳಿಯವರ ಕಥಾಲೋಕ ಈವರೆಗೆ ಕಂಡುಕೊಳ್ಳಲು ಯತ್ನಿಸಿರುವ ಸೂಜಿಗಾತ್ರದ ಬೆಳಕಿನ ಪ್ರಮಾಣವೇ ಇರಲಿ, ಅದು ಒಂದು ಸಮುದಾಯದ ಬದುಕಿನ ಬ್ರಹ್ಮಾಂಡ ಸತ್ಯವನ್ನು ತೆರೆದಿಡುತ್ತದೆ' ಎಂದು ಖ್ಯಾತ ಕತೆಗಾರ ಕೇಶವ ಮಳಗಿ ಅಭಿಪ್ರಾಯ ಪಡುತ್ತಾರೆ.