‘ಚಿತ್ರ ಮಂಥನ` ಗೋಪಾಲಕೃಷ್ಣ ಪೈ ಸಂಪಾದಕತ್ವದ ಪಿ.ಶೇಷಾದ್ರಿ ಅವರ ಸಿನಿಮಾವಲೋಕನ ಕೃತಿಯಾಗಿದೆ. ಇಲ್ಲಿ ‘ಮುನ್ನುಡಿ’ ಚಿತ್ರದಿಂದ ‘ಮೋಹನದಾಸ’ವರೆಗಿನ ಸಿನಿಮಾ ಕಥನಗಳು ಕಾಣಬಹುದಾಗಿದೆ.ಸಮಾಜದಲ್ಲಿ ನೈತಿಕತೆಯ ಪಾತ್ರ ಮತ್ತು ಅದರ ಅಭಾವ ಅವರ ಕಲಾಭಿವ್ಯಕ್ತಿಯ ವಿಶ್ಲೇಷಣೆಯ ಮೂಲ ಕಾಳಜಿ, ಸಮಾಜದಲ್ಲಿನ ಪುರುಷ ಕೇಂದ್ರಿತ ವ್ಯವಸ್ಥೆ, ಹೆಣ್ಣಿನ ಶೋಷಣೆ, ಇವುಗಳು ಅನೈತಿಕ ವ್ಯಾಪಾರಗಳಿಗೆ ಮೌನ ಪ್ರೇರಣೆಯನ್ನು ನೀಡುತ್ತವೆ ಎಂಬ (ಮುನ್ನುಡಿ) ಕಥಾನಕದಿಂದ ಪ್ರಾರಂಭಗೊಂಡ ಇವರ ಸಿನಿಮಾಯಾನ ನಂತರದ ದಿನಗಳಲ್ಲಿ ಅಧಿಕಾರಶಾಹಿಯ ಅನೈತಿಕತೆ, ಭ್ರಷ್ಟಾಚಾರ (ಬೇರು) ಕಥನಗಳನ್ನು ತೆರೆದಿಡುತ್ತದೆ. ಭಯೋತ್ಪಾದಕತೆ ನಮ್ಮ ನೆರೆಯಲ್ಲಿ, ಸಮಾಜದಲ್ಲಿ ಇದ್ದಾಗ ಅದನ್ನು ಭಾವನಾತ್ಮಕ ನೆಲೆಯಲ್ಲಿ ನೋಡುವ ಪ್ರಯತ್ನ (ಅತಿಥಿ), ಸಮುದಾಯ ಮತ್ತು ವ್ಯಕ್ತಿತ್ವಗಳ ನಡುವಿನ ಬಿರುಕು (ತುತ್ತೂರಿ), ಆಧುನಿಕತೆ ರೂಢಿಸಿರುವ ವಲಸೆ, ಅದರಿಂದ ಉಂಟಾಗುವ ಸಾಂಸಾರಿಕ ಕೋಭೆ (ಬೆಟ್ಟದ ಜೀವ), ರಾಜಕೀಯ ಗೋಸುಂಬೆತನ (ಡಿಸೆಂಬರ್-1), ಲೈಂಗಿಕ ಅಸಮಾನತೆ (ಬೇಟಿ), ಆರ್ಥಿಕ ಉದಾರೀಕರಣದ ಪ್ರಭಾವದಿಂದ ಉಂಟಾದ ಸಾಂಸ್ಕೃತಿಕ ಪಲ್ಲಟ (ಭಾರತ್ ಸ್ಟೋರ್ಸ್) - ಹೀಗೆ ಹತ್ತು ಹಲವು ರೀತಿಯ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಬದಲಾವಣೆಗಳನ್ನು ದಾಖಲಿಸುತ್ತಾ ಬಂದಿದೆ. ಈ ಮಧ್ಯೆ ಪಾಶ್ಚಾತ್ಯ ಪ್ರಭಾವ ಮತ್ತು ಅದರಿಂದಾದ ಜೀವನಕ್ರಮದಲ್ಲಿನ ಬದಲಾವಣೆಗಳಿಂದ ಉಂಟಾಗುವ ಸ್ಥಿತ್ಯಂತರಗಳನ್ನು ಗ್ರಹಿಸುವ ಯತ್ನದಲ್ಲಿ 'ವಿಮುಕ್ತಿ' ಮತ್ತು 'ವಿದಾಯ'ಗಳಂಥ ಚಿತ್ರಗಳನ್ನೂ ಅವರು ಕೊಟ್ಟಿದ್ದಾರೆ. ಕಳೆದ ನೂರು ವರ್ಷಗಳಲ್ಲಿ ಮನುಷ್ಯ ಸಂಬಂಧಗಳು ಕಂಡ ತೀವ್ರ ಬದಲಾವಣೆ 'ಮೂಕಜ್ಜಿಯ ಕನಸುಗಳು' ಚಿತ್ರದಲ್ಲಿ ಕಂಡರೆ, ಒಂದೇ ಜೀವನದ ಚಲನೆಯಲ್ಲಿ ಬದಲಾವಣೆಗೊಳ್ಳುವ ಪ್ರವೃತ್ತಿಯನ್ನು 'ಮೋಹನದಾಸ' ಚಿತ್ರಿಸುತ್ತದೆ. ಹೀಗೆ ಇಲ್ಲಿಯವರೆಗೆ 12 ಚಿತ್ರಗಳನ್ನು ನಿರ್ದೇಶಿಸಿರುವ ಹಾಗೂ ಒಂಬತ್ತು ಬಾರಿ ರಾಷ್ಟ್ರಪ್ರಶಸ್ತಿ ಪುರಸ್ಕೃತರಾಗಿರುವ ಇವರ ಚಿತ್ರಗಳ ಕುರಿತ ಮಂಥನ ಈ ಕೃತಿಯ ಹೂರಣ.
ಮೂಲತಃ ಕೇರಳದ ಕಾಸರಗೋಡು ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಮಧ್ಯೆ ಇರುವ ಪೆರ್ಲ ಮೂಲದ ಗೋಪಾಲಕೃಷ್ಣ ಪೈ ಅವರು ಕತೆ,ನಾಟಕ ,ಪ್ರಬಂದ, ಲೇಖನ ಕಾದಂಬರಿಗಳನ್ನು ಬರೆಯುವುದರಲ್ಲಿ ಪ್ರವೀಣರು. ನಾಟಕ ವಿಮರ್ಶೆ ಮೊದಲಾದ ಹಲವು ಪ್ರಕಾರಗಳಲ್ಲಿ ಕೈಯ್ಯಾಡಿಸಿ ಉತ್ತಮ ಸಾಹಿತ್ಯ ಕೃಷಿಯನ್ನು ಬೆಳೆಸುತ್ತಿರುವ ಗೋಪಾಲಕೃಷ್ಣ ಪೈ ಅವರ ಮತ್ತಿತರ ಕೃತಿಗಳು ಇಂತಿವೆ; ತಿರುವು, ಈ ಬೆರಳ ಗುರುತು, ಹಾರುವ ಹಕ್ಕಿಯ ಗೂಡಿನ ದಾರಿ ,ಮೊದಲಾದ ಚಿಕ್ಕ ಕಥೆಗಳು. ಆಧುನಿಕ ಚೀನೀ ಸಣ್ಣಕಥೆಗಳು, 'ಪೆರ್ಲ ಗೋಪಾಲಕೃಷ್ಣ ಪೈ'ರವರ ಸ್ವಪ್ನ ಸಾರಸ್ವತ ಕಾದಂಬರಿಗೆ 2010 ರ ಸಾಲಿನ 'ಪ್ರತಿಷ್ಠಿತ ಕೇಂದ್ರ ಸಾಹಿತ್ಯ ...
READ MORE