ಪ್ರಸಿದ್ಧ ಚಿಂತಕ-ವಿಮರ್ಶಕ ಆಗಿದ್ದ ಅನಂತಮೂರ್ತಿ ಅವರು ಪತ್ರಿಕೆಗಳಿಗೆ ಆಗಾಗ ಬರೆದ ಬಿಡಿ ಲೇಖನಗಳು, ಮುನ್ನುಡಿ ಮತ್ತು ಭಾಷಣಗಳನ್ನು ಇಲ್ಲಿ ಒಟ್ಟುಗೂಡಿಸಲಾಗಿದೆ. ಅನಂತಮೂರ್ತಿ ಬರಹವೆಂದರೆ ಅಲ್ಲಿ ವಿವರಣೆಗಳು, ಒಳನೋಟಗಳು, ಕತೆಗಳು, ರೂಪಕಗಳು ಬೆರೆತಿರುತ್ತವೆ.
ಭೀಷ್ಮಪ್ರಜ್ಞೆಯ ಲೇಖನಗಳ ಬಗ್ಗೆ ಅನಂತಮೂರ್ತಿ ಅವರಿ ಟಿಪ್ಪಣಿ ಹೀಗಿದೆ-
'ಮಹಾಭಾರತದಲ್ಲಿ ಭೀಷ್ಮನನ್ನು ಎಲ್ಲರೂ ಯಾಚಿಸುವವರೆ; ಸ್ವಂತ ಅಪ್ಪನೂ ಕೂಡ. ಅಪ್ಪನ ಕಾಮಜೀವನಕ್ಕಾಗಿ ತನ್ನ ಕಾಮ ಜೀವನವನ್ನು ತ್ಯಾಗ ಮಾಡಿದ ಈ ಭೀಷ್ಮನನ್ನು ಯಾರೂ ಉತ್ಕಟವಾಗಿ ಪ್ರೀತಿಸುವಂತೆ ನಮಗೆ ಕಾಣುವುದಿಲ್ಲ. ಹುಷಾರು ತಪ್ಪಿ ನಡೆದುಕೊಳ್ಳುವವರೇ - ಅರ್ಜುನ, ಭೀಮ, ಕರ್ಣ, ದ್ರೌಪದಿ - ನಮಗೆ ಪ್ರಿಯರಾಗುವುದು. ಇತ್ತ ಗೃಹಸ್ಥನೂ ಆಗದೆ, ಸನ್ಯಾಸಿಯೂ ಆಗದೆ ಎಲ್ಲದಕ್ಕೂ ಸಾಕ್ಷಿಯಾಗಿ ಬದುಕುವ ಈ ಮುದುಕನಿಗೆ ಯೌವನವೇ ಇಲ್ಲವೆನ್ನಿಸುತ್ತದೆ...
ಈ ವ್ಯಕ್ತಿಯ ನೈತಿಕ ಲೋಕ ಯಾವ ಬಗೆಯದೆಂದು ಆಲೋಚಿಸುತ್ತಿದ್ದಂತೆ ನನಗೆ ಹೊಳೆದದ್ದು ತನ್ನ ಕಾಲಕ್ಕೆ ಆಯ್ಕೆಯ ಸಂಕಟದಲ್ಲಿ ಎದುರಾಗುವ, ಸರಳವಾದ ತೀರ್ಪಿಗೆ ಬರಲಾರದೆ ಸುಮ್ಮನಿರುವಂತೆ ತೋರುವ ಲಿಬರಲ್ ಧೋರಣೆಯ ಮನುಷ್ಯನದು. ತಾನು ಮಾಡುವುದು ತಪ್ಪೋ ಸರಿಯೋ ಎಂಬ ಬಗ್ಗೆ ತೀರ ತಲೆಕೆಡಿಸಿಕೊಳ್ಳದವರೇ ಎಲ್ಲ ಕಾಲದಲ್ಲೂ ಕ್ರಿಯಾಶೀಲರು. ಇಂಥವರ ನಡುವೆ ಭೀಷ್ಠ ಮೌನಿ; ಕಾಲಕ್ಕೆ ತನ್ನನ್ನು ಒಡ್ಡಿಕೊಂಡವನು. ಯೌವನವನ್ನೇ ಕಾಣದ ಅಕಾಲ ವೃದ್ದ.ಸದ್ಯ ಮತ್ತು ಶಾಶ್ವತಕ್ಕೆ ಕನ್ನಡಿಯಾಗಿರುವುದು ಒಂದು ಭಾಷೆಯ ನಿಜವಾದ ಜವಾಬ್ದಾರಿ. ನಾವು ಅನೇಕ ಸಲ ಸದ್ಯದ ಬಗ್ಗೆ ದಿಗಿಲುಗೊಂಡು ಶಾಶ್ವತವನ್ನು ಮರೆತೆಬಿಡುತ್ತೇವೆ. ಕೆಲವು ಸಲ ಶಾಶ್ವತದ ಆರಾಧಕರಾಗಿ ಸದ್ಯಕ್ಕೆ ಸ್ಪಂದಿಸದೆ ಹೋಗುತ್ತೇವೆ. ಪಂಪ ಸದ್ಯಕ್ಕೂ ಮಿಡಿದ, ತನ್ನ ರಾಜನನ್ನೇ ಅರ್ಜುನನ್ನಾಗಿ - ತನ್ನ ಕಾಲದವನನ್ನೇ ಮಾಡಿಕೊಂಡ. ಕರ್ನಾಟಕದ ನದಿಗಳು ಕೂಡ ಪಂಪನಲ್ಲಿ ಹರಿಯುತ್ತವೆ. ಸದ್ಯ ಮತ್ತು ಶಾಶ್ವತವನ್ನು ನಾವು ಕನ್ನಡದಲ್ಲಿ ಯಾವತ್ತೂ ಬೆರೆಸುತ್ತಾ ಬಂದಿದ್ದೇವೆ.'
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE