ಸಾಹಿತ್ಯ ಸಂಕಥನ ಎನ್ನುವುದೊಂದಿದೆ: ಅದು ಸಾಹಿತ್ಯ ಕೃತಿಗಳ ಅಧ್ಯಯನದ ಫಲವಾಗಿ ಮೂಡಿ ಬರುವ ವಾಙ್ಮಯವಾಗಿದ್ದು ಅದರ ವ್ಯಾಪ್ತಿಯನ್ನು ಇಂತಿಷ್ಟೇ ಎಂದು ಹೇಳುವುದು ಸಾಧ್ಯವಿಲ್ಲ. ಕೃತಿಯ ವಿಶ್ಲೇಷಣೆ, ವಿಮರ್ಶೆ, ಕೃತಿಕಾರನ ಜೀವನಚರಿತ್ರೆ, ಕಾಲ, ಜನಜೀವನ, ಕೃತಿಯ ಮೇಲಿನ ಪ್ರಭಾವ, ಸಾಹಿತ್ಯ ಕ್ರಾಂತಿಗೆ ಅದು ನೀಡಿದ ಕೊಡುಗೆ ಮುಂತಾದ ಎಲ್ಲವೂ ಇದರಲ್ಲಿ ಸೇರುತ್ತವೆ. ಇಂಥವನ್ನೆಲ್ಲ ತೆಗೆದುಹಾಕಿದರೆ ಕೃತಿ ತಾಳೆ ಮರದಂತೆ ಒಂಟಿಯಾಗಿ ನಿಲ್ಲುತ್ತದೆ! ಹಾಗಾಗುವುದಕ್ಕೆ ನಮ್ಮ ಸಾಮಾಜಿಕ ಜೀವನ ಬಿಡುವುದಿಲ್ಲ. ಎಲ್ಲಾ ಕೃತಿಗಳೂ ಕಾಲಾಂತರದಲ್ಲಿ ಉಳಿಯುವುದಿಲ್ಲ ಎಂಬ ಮೆಟಫಿಸಿಕಲ್ ಪ್ರಶ್ನೆ ಒತ್ತಟ್ಟಿಗಿರಲಿ. ನಾವು ಯಾಕೆ ಓದಬೇಕು ಎಂದು ಒಬ್ಬರು ನನ್ನನ್ನು ಗಂಭೀರವಾಗಿಯೇ ಕೇಳಿದರು. ಅವರು ಉದ್ದೇಶಿಸಿದ್ದು ಸಾಹಿತ್ಯದ ಓದನ್ನು. ನಾನು ಅವರಿಗೆ ಏನು ಹೇಳಿದೆನೋ ನನಗೀಗ ನೆನಪಿಲ್ಲ. ಇದಕ್ಕೆ ಏನು ಹೇಳಿದರೂ ಅದು ತೃಪ್ತಿಕರ ಉತ್ತರ ಎನಿಸುವುದಿಲ್ಲ. ಇಂಥ ಅನೇಕ ನಿರುತ್ತರಗಳು ಇವೆ. ಬಹುಶಃ ಬೇರೆ ಯಾರೂ ಹೇಳದುದನ್ನು ತಿಳಿದುಕೊಳ್ಳಬೇಕೆನ್ನುವ ಆಕಾಂಕ್ಷೆಯೇ ನಮ್ಮನ್ನು ಈ ಅಕ್ಷರ ಪ್ರಪಂಚಕ್ಕೆ ಎಳೆದಿರಬಹುದು. ಇದರ ಮೂಲದಲ್ಲಿ ಮನುಷ್ಯನ ಕೆಲಸ ಮಾಡುತ್ತಿರಬಹುದು. ಅಂತೂ ಸಾಹಿತ್ಯದ ಓದು ನಮ್ಮ ಬದುಕಿನಲ್ಲಿ ಬಹು ಮುಖ್ಯ ಸ್ಥಾನವನ್ನು ಪಡೆದುಕೊಂಡಿದೆ. ಎಂದು ಕೆ. ವಿ. ತಿರುಮಲೇಶ್ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ಪ್ರಬಂಧಗಾರ್ತಿ ಸುಮಾ ವೀಣಾ ಅವರು ಉಪನ್ಯಾಸಕಿ. ತಂದೆ ಪುಟ್ಟರಾಜು, ತಾಯಿ ಲಲಿತಾ. ಹಾಸನದ ಹೇಮಗಂಗೋತ್ರಿಯಲ್ಲಿ ಕನ್ನಡ ಎಂ. ಎ ಅಧ್ಯಯನ. ವಿದ್ಯಾರ್ಥಿ ದಿಸೆಯಿಂದಲೇ ರಾಜ್ಯ ಮತ್ತು ರಾಷ್ಟ್ರಿಯ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ. ಅವರ ಬರೆಹಗಳು ವಿಜಯವಾಣಿ, ಸುಧಾ ವಾರ ಪತ್ರಿಕೆಯಲ್ಲಿ ಪ್ರಕಟವಾಗಿವೆ. ವಚನ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ. ಕೃತಿಗಳು: ನಲಿವಿನ ನಾಲಗೆ (ಪ್ರಬಂಧಗಳ ಸಂಕಲನ), ಶೂರ್ಪನಖಿ ಅಲ್ಲ ಚಂದ್ರ ನಖಿ (ಕವನ ಸಂಕಲನ), ಮನಸ್ಸು ಕನ್ನಡಿ (ಪ್ರಬಂಧಗಳ ಸಂಕಲನ). ...
READ MORE